SUDDIKSHANA KANNADA NEWS/ DAVANAGERE/ DATE:07-01-2025
ದಾವಣಗೆರೆ: ನಗರದ ಹೊಸಕುಂದುವಾಡದಲ್ಲಿ ಕೌಟುಂಬಿಕ ಕಲಹ ವಿಚಾರಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ತಲೆ ಮರೆಸಿಕೊಂಡಿದ್ದ ಪ್ರಕರಣದಲ್ಲಿನ ಆರೋಪಿತರಾದ ಹೊಸಕುಂದವಾಡ ಗ್ರಾಮದ ಮಂಜುನಾಥ (24), ಗುತ್ತಿಗೆದಾರ ತಾತಪ್ಪ (56) ) ಬಸವರಾಜು (36) ಬಂಧಿಸಲಾಗಿದೆ.
ಘಟನೆ ಹಿನ್ನೆಲೆ:
ದಾವಣಗೆರೆ ಹೊಸಕುಂದವಾಡ ಗ್ರಾಮದ ತಾತಪ್ಪ ಎಂಬುವರ ಪುತ್ರಿ ಟಿ. ರೂಪಾ ಅವರು ಸುಮಾರು ಒಂದೂವರೆ ವರ್ಷದ ಹಿಂದೆ ಅದೇ ಗ್ರಾಮದ ಧನಂಜಯ ಎಂಬುವನನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆಯ ವಿಚಾರವಾಗಿ ಟಿ. ರೂಪಾ ಅವರ ಮನೆಯವರಿಗೆ ಅಸಮಾಧಾನವಿತ್ತು. ಆದ್ದರಿಂದ ಧನಂಜಯ ಅವರಿಗೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಲಾಗಿತ್ತು. ಈ ವಿಚಾರವಾಗಿ ಗ್ರಾಮದಲ್ಲಿ ಪಂಚಾಯಿತಿ ನಡೆದಿದ್ದು ಇಬ್ಬರಿಗೂ ಬುದ್ದಿವಾದ ಹೇಳಲಾಗಿತ್ತು. ರೂಪಾ.ಟಿ ಮತ್ತು ಧನಂಜಯ ಇಬ್ಬರೂ ದಾವಣಗೆರೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದರು.
ಆದ್ರೆ, ಜನವರಿ 4ರಂದು ಬೆಳಗ್ಗೆ 11 ಗಂಟೆಗೆ ಧನಂಜಯನು ಹೊಸಕುಂದವಾಡ ಗ್ರಾಮದಲ್ಲಿದ್ದ ತನ್ನ ತಾಯಿ ಕರೆದುಕೊಂಡು ಬರಲು ದಾವಣಗೆರೆಯಿಂದ ತೆರಳಿದ್ದ. ದಾವಣಗೆರೆಯ ತನ್ನ ಮನೆಗೆ ಕರೆದುಕೊಂಡು ಬರಲು ತನ್ನ ಬೈಕ್‌ನಲ್ಲಿ ಹೋಗಿದ್ದ. ಆಗ ತನ್ನ ತಾಯಿ ಹಾಗೂ ತನ್ನ ಸಂಬಂಧಿಕರ 3 ವರ್ಷದ ಮಗಳೊಂದಿಗೆ ಮದ್ಯಾಹ್ನ ಸುಮಾರು 2.15 ಗಂಟೆಯಲ್ಲಿ ವಾಪಸ್ ದಾವಣಗೆರೆಗೆ ಬರುತ್ತಿರುವಾಗ ಆರೋಪಿತರಾದ ಮಂಜುನಾಥ, ಬಸವರಾಜಪ್ಪ ಮತ್ತು ತಾತಪ್ಪ ಅವರು ಧನಂಜಯನನ್ನು ಕೊಲೆ ಮಾಡುವ ಒಳಸಂಚು ರೂಪಿಸಿದ್ದರು.
ಧನಂಜಯನನ್ನು ಕೊಲೆ ಮಾಡುವ ಸಂಬಂಧ ಆರೋಪಿತನಾದ ಮಂಜುನಾಥನು ತನ್ನ ಮಹೀಂದ್ರಾ ಟ್ರಾಕ್ಟರ್‌ನಲ್ಲಿ ಬಂದು ಹೊಸಕುಂದವಾಡ ಗ್ರಾಮದ ಬಳಿಯ ಎನ್.ಹೆಚ್-48 ಸರ್ವೀಸ್ ರಸ್ತೆಯಲ್ಲಿ ಢಿಕ್ಕಿ ಹೊಡೆದು, ಬೈಕ್‌ನಿಂದ ಕೆಳಗೆ ಬಿದ್ದ ಧನಂಜಯ, ನಿರ್ಮಲ ಅವರಿಗೆ ಟ್ರಾಕ್ಟರ್‌ನಲ್ಲಿದ್ದ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದ ಹಾಗೂ ಬಾಲಕಿ ನಿಹಾರಿಕಾಳಿಗೆ ಗಾಯವನ್ನುಂಟು ಮಾಡಿ ಓಡಿಹೋಗಿದ್ದ ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ, ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ್ ದೊಡ್ಡಮನಿ ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ವೈ. ಎಸ್. ಶಿಲ್ಪಾ, ಪಿಎಸ್ಐ ವಿಶ್ವನಾಥ ಜಿ.ಎನ್, ವಿಜಯ್ ಎಂ. ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ ಶಂಕರ್ ಜಾಧವ್, ಎಂ. ಆನಂದ, ನಟರಾಜ್, ಲಕ್ಷ್ಮಣ್, ಭೋಜಪ್ಪ.ಕೆ, ಚಂದ್ರಪ್ಪ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿ ರಾಘವೇಂದ್ರ ಅವರನ್ನು ಜಿಲ್ಲಾ ಪೊಲೀಸ್
ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.