SUDDIKSHANA KANNADA NEWS/ DAVANAGERE/ DATE:16-11-2024
ದಾವಣಗೆರೆ: ವಿವಿಧೆಡೆ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 3.5 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆಯ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಮುಬಾರಕ್ ಅಲಿ (31), ಚನ್ನಗಿರಿ ತಾಲೂಕಿನ ಬಸವಪಟ್ಟಣದ ನೌಷದ್ (31), ಚನ್ನಗಿರಿ ಟೌನ್ ಲಷ್ಕರ್ ಮೊಹಲ್ಲಾದ ಗಾರೆ ಕೆಲಸ ಮಾಡುತ್ತಿದ್ದ ಶಾರೂಕ್ ಖಾನ್ (28) ಬಂಧಿತ ಆರೋಪಿಗಳು.
ಚನ್ನಗಿರಿ ತಾಲೂಕಿನ ಹಿರೇಮಳಲಿ ಗ್ರಾಮದ ಪುನೀತ್ ಕುಮಾರ್ ಅವರ ಬಾಬ್ತು ಅಡಿಕೆ ತೋಟದ ಮಿಷಿನ್ ಮನೆಯಲ್ಲಿ ಇರಿಸಿದ್ದ 4 ಸಬ್ ಮರ್ಸಿಬಲ್ ಪಂಪ್ ಸೆಟ್ ನ್ನು ಕಳೆದ ಜುಲೈ 17ರಂದು ರಾತ್ರಿ 10 ಗಂಟೆಯಿಂದ ಮಾರನೇ ದಿನ 6 ಗಂಟೆಯೊಳಗೆ ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಮಿಷಿನ್ ಮನೆಯ ಬೀಗ ಮುರಿದು ಒಳ ಪ್ರವೇಶ ಮಾಡಿ 4 ಸಬ್ ಮರ್ಸಿಬಲ್ ಮೊಟರ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ್ ಕುಮಾರ್ ಎಂ ಸಂತೋಷ್, ಜಿ. ಮಂಜುನಾಥ್ ಹಾಗೂ ಚನ್ನಗಿರಿ ಉಪ-ವಿಭಾಗದ ಎಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ಬಾಲಚಂದ್ರ ನಾಯ್ಕ್ ರವರ ನೇತೃತ್ವದಲ್ಲಿ ಪಿಎಸ್ಐ ಸುರೇಶ್ ಹಾಗೂ ಪಿಎಸ್ಐ ಗುರುಶಾಂತಯ್ಯ ಚನ್ನಗಿರಿ ಪೊಲೀಸ್ ಠಾಣೆಯ ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದೆ
ಬಂಧಿತರು ಚನ್ನಗಿರಿ ಠಾಣಾ ವ್ಯಾಪ್ತಿಯ ಹಿರೇಮಳಲಿ, ನಲ್ಲೂರು, ಲಕ್ಷ್ಮೀ ಸಾಗರ ಮತ್ತು ಲಿಂಗದಹಳ್ಳಿ ಹಾಗೂ ಸಂತೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡದಹಳ್ಳಿ ಗ್ರಾಮಗಳಲ್ಲಿ ಒಟ್ಟು 5 ಕಡೆ ಕಳುವು ಮಾಡಿದ್ದ 2,00,000 ರೂಪಾಯಿ ಬೆಲೆ ಬಾಳುವ 5 ಸಬ್ ಮರ್ಸಿಬಲ್ ಪಂಪ್ ಸೆಟ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 1,50,000 ರೂಪಾಯಿ ಬೆಲೆ ಬಾಳುವ ಕೆಎ-17 ಡಿ-4155 ನೇ ಪ್ಯಾಸೆಂಜರ್ ಆಟೋ ಸೇರಿ ಒಟ್ಟು 3,50,000 ರೂ ಬೆಲೆ ಬಾಳುವ ಸಬ್ ಮರ್ಸಿಬಲ್ ಪಂಪ್ ಸೆಟ್ ಮತ್ತು ಪ್ಯಾಸೆಂಜರ್ ಆಟೋ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕಣದಲ್ಲಿ ಆರೋಪಿತರು ಹಾಗೂ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ನಿರೀಕ್ಷಕ ಬಾಲಚಂದ್ರ ನಾಯ್ಕ್, ಪಿಎಸ್ಐ ಸುರೇಶ್, ಪಿಎಸ್ಐ ಗುರುಶಾಂತಯ್ಯ ಹಾಗೂ ಸಿಬ್ಬಂದಿಯರಾದ ರವಿಕುಮಾರ್, ಹರೀಶ್ ಕುಮಾರ್, ರಮೇಶ, ಚನ್ನಕೇಶವ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.