SUDDIKSHANA KANNADA NEWS/ DAVANAGERE/ DATE:24-08-2024
ದಾವಣಗೆರೆ: ಆಸ್ಪತ್ರೆಗೆ ದಾಖಲಾಗಿದ್ದ ಮಗು ಉಸಿರಾಡಲು ಸಾಧ್ಯವಾಗದೇ ರಕ್ತಸ್ರಾವ ಆಗಲು ಶುರುವಾದಾಗ ತಂದೆಗೆ ಮಾಹಿತಿ ನೀಡಿದ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮಂಜುನಾಥ್ ಎಂಬಾತನೇ ಬಂಧಿತ ಆರೋಪಿ. ಡಾ. ಸನ್ನಿದಿ ನಾಯಕ್ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ.
ಘಟನೆ ಹಿನ್ನೆಲೆ ಏನು..?
ತಾನ್ವಿ ಎಂಬ ನಾಲ್ಕು ವರ್ಷದ ಬಾಲಕಿಯನ್ನು ದಾವಣಗೆರೆ ಬಾಪೂಜಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶುಕ್ರವಾರ ರಾತ್ರಿ 9 ಗಂಟೆಯಿಂದ ಮರು ದಿನ ಬೆಳಿಗ್ಗೆ 9 ಗಂಟೆವರೆಗೆ ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಜೆಜೆಎಂ ಮೆಡಿಕಲ್ ಕಾಲೇಜ್ ನಲ್ಲಿ 2ನೇ ವರ್ಷದ ಸ್ನಾತಕೋತರ ವೈದ್ಯಕೀಯ ವಿದ್ಯಾರ್ಥಿ ಡಾ. ಸನ್ನಿದಿ ನಾಯಕ್ ಹಾಗೂ ಸಹದ್ಯೋಗಿ ಡಾ. ನಿಶಾಂತ್ ಡಿ.ಎಸ್, ಡಾ. ಅಂಕುಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.
ಅದೇ ದಿನ ರಾತ್ರಿ 11. 48 ಗಂಟೆಗೆ ಮಂಜುನಾಥ ಹಾಗೂ ಅವರ ಪತ್ನಿ ಉಷಾ ಎಂಬುವವರು ಅವರ ಸುಮಾರು 4 ವರ್ಷ ವಯಸ್ಸಿನ ತಾನ್ವಿ ಎಂಬ ಹೆಣ್ಣು ಮಗುವನ್ನು ಚಿಕಿತ್ಸೆಗೆ ದಾಖಲಿಸಿದ್ದರು. ಮಗುವನ್ನು ಪರೀಕ್ಷಿಸಿ ನೋಡಿದಾಗ ನಾಡಿಮಿಡಿತ ಇರಲಿಲ್ಲ. ಕೈ ಕಾಲು ತಣ್ಣಗಾಗಿತ್ತು. ಬಿ.ಪಿ ರೆಕಾರ್ಡ್ ಆಗಿರಲಿಲ್ಲ. ಈ ಎಲ್ಲ ವಿಷಯವನ್ನು ಮಗುವಿನ ತಂದೆ- ತಾಯಿಗೆ ತಿಳಿಸಿದೆವು. ಆದ್ರೆ, ಇಂದು ಬೆಳ್ಳಂಬೆಳಿಗ್ಗೆ 1. 33ರ ಸುಮಾರಿಗೆ ಮಗುವನ್ನು ತೀವ್ರನಿಗಾಘಟಕಕ್ಕೆ ಕಳುಹಿಸಿ ಕೊಡಲಾಯಿತು.
ನಂತರ 3.45ಕ್ಕೆ ಪರೀಕ್ಷಿದಾಗ ಮಗುವಿನ ಸ್ಥಿತಿ ಗಂಭೀರವಾಗಿ ಉಸಿರಾಡಲು ತೊಂದರೆ ಆಗಿ ರಕ್ತಸ್ರಾವ ಆಗಲು ಶುರುವಾಯಿತು. ಇದನ್ನು ನೋಡಿ ಸನ್ನಿಧಿ ನಾಯಕ್, ಡಾ. ನಿಶಾಂತ್ ಡಿ.ಎಸ್, ಡಾ. ಅಂಕುಶ್ ಅವರು ಸಿ.ಪಿ.ಆರ್
ಮಾಡುತ್ತಿರುವಾಗ ಏಕಾಏಕಿ ಮಗುವಿನ ತಂದೆಯಾದ ಮಂಜುನಾಥನು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಸನ್ನಿಧಿನಾಯಕ್ ತಲೆಯ ಕೂದಲು ಹಿಡಿದು ಮತ್ತು ಬಟ್ಟೆಯನ್ನು ಹಿಡಿದು ಎಳೆದಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಡಾ. ನಿಶಾಂತ್ ಡಿ. ಎಸ್. ಅವರಿಗೆ ಕಾಲಿನಿಂದ ಹೊಟ್ಟೆಗೆ ಒದ್ದಿದ್ದಲ್ಲದೇ, ಡಾ. ಅಂಕುಶ್ ಅವರಿಗೆ ಕೈಗಳಿಂದ ಹಲ್ಲೆ ಮಾಡಿದ್ದು, ಮಗುವಿನ ತಂದೆ ಮಂಜುನಾಥ್ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಬಡಾವಣೆ ಪೋಲಿಸ್ ಠಾಣೆಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಲಾಗಿದೆ. ಈ ಪ್ರಕರಣದಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ್ದ ಆರೋಪಿತನಾದ ಮಂಜುನಾಥನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ತಾನ್ವಿ (4) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.