SUDDIKSHANA KANNADA NEWS/ DAVANAGERE/ DATE:01-12-2024
ದಾವಣಗೆರೆ: ಡಾಬಾದಲ್ಲಿ ಊಟ ಮುಗಿಸಿ ವಿಶ್ರಾಂತಿ ಪಡೆಯುವಾಗ ಪಲ್ಸರ್ ಬೈಕ್ ನಲ್ಲಿ ಬಂದು ದರೋಡೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 112 ಹೊಯ್ಸಳ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದರೋಡೆಕೋರರನ್ನು ಸೆರೆ ಹಿಡಿದು ಸ್ವತ್ತು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ನಿವಾಸಿಗಳಾದ ತರುಣ್, ಸಿಕಂದರ್, ಐಗೂರು ವಾಸಿ ಪ್ರಶಾಂತ್ ಬಂಧಿತ ಆರೋಪಿಗಳು. ಬಂಧಿತರಿಂದ ಸುಲಿಗೆ ಮಾಡಿದ್ದ 1 ರಿಯಲ್ ಮಿ ಮೊಬೈಲ್, 2000 ನಗದು, ಒಂದು ಬೆಳ್ಳಿ ಉಂಗುರ, ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ 27ರಂದು ದಾವಣಗೆರೆ ತಾಲೂಕಿನ ಕಾಟೇಹಳ್ಳಿ ತಾಂಡಾದ ದಾದಪೀರ್ ಅಲಿಯಾಸ್ ಮಹಮದ್ ಎಂಬುವವರು ತರಗಾರ ಕೆಲಸ ಮುಗಿಸಿಕೊಂಡು ರಾತ್ರಿ ಐಗೂರು ಗೊಲ್ಲರಹಟ್ಟಿ ಬಳಿಯ ಜೀವನ್ ಡಾಬಾದಲ್ಲಿ ಊಟ ಮಾಡಿ ಡಾಬಾದ ಬಳಿ ನಿಲ್ಲಿಸಿದ್ದ ಬೈಕ್ ಬಳಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಪಲ್ಸರ್ ಬೈಕ್ ನಲ್ಲಿ ಬಂದ ಮೂವರು ಯುವಕರು ದಾದಾಪೀರ್ ಮೇಲೆ ಹಲ್ಲೆ ನಡೆಸಿ ಹೆದರಿಸಿ 2 ಬೆಳ್ಳಿಯ ಉಂಗುರ, ಜೇಬಿನಲ್ಲಿದ್ದ 2 ಸಾವಿರ ರೂಪಾಯಿ, ರಿಯಲ್ ಮಿ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದರು.
ಕೂಡಲೇ ದಾದಪೀರ್ 112 ತುರ್ತು ಸಹಾಯವಾಣಿಗೆ ಕರೆ ಮಾಡಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಪಲ್ಸರ್ ಬೈಕ್ ನಲ್ಲಿ ಹೋಗುತ್ತಿದ್ದ ಯುವಕರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ವಿಚಾರಣೆ ನಡೆಸಿದಾಗ ಮಾಡಿದ ಕೃತ್ಯ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
112 ತುರ್ತು ಸಹಾಯವಾಣಿ ಅಧಿಕಾರಿಗಳು ಚನ್ನಗಿರಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ದಾವಣಗೆರೆ ಗ್ರಾಮಾಂತರ ವಿಭಾಗದ ಡಿವೈಎಸ್ಪಿ ಬಿ. ಎಸ್. ಬಸವರಾಜ್, ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಕಿರಣ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು.
ಆರೋಪಿತರನ್ನು ಬಂಧಿಸಿದ 112 ಹೊಯ್ಸಳ 07 ಕರ್ತವ್ಯ ಅಧಿಕಾರಿಗಳಾದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಣ್ಣನಾಗೇಂದ್ರಪ್ಪ, ಪೊಲೀಸ್ ಕಾನ್ಸ್ಟೇಬಲ್ ವೀರೇಶ್ ಅವರು ದೂರು ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಕಾರ್ಯಾಚರಣೆ ನಡೆಸಿದ 112 ಹೊಯ್ಸಳ ಅಧಿಕಾರಿಗಳನ್ನು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯ್ ಕುಮಾರ್ ಎಂ. ಸಂತೋಷ್, ಜಿ. ಮಂಜುನಾಥ್ ಅವರು ಅಭಿನಂದಿಸಿದ್ದಾರೆ.