SUDDIKSHANA KANNADA NEWS/ DAVANAGERE/ DATE:24-10-2024
ದಾವಣಗೆರೆ: ಶ್ರೀಗಂಧದ ಮರ ಕಳ್ಳತನ ಮಾಡಿದ್ದ ಕಳ್ಳನನ್ನು ಬಂಧಿಸಿರುವ ಸಂತೇಬೆನ್ನೂರು ಪೊಲೀಸರು ಬಂಧಿತರಿಂದ 3.15 ಲಕ್ಷ ಮೌಲ್ಯದ ಶ್ರೀಗಂಧ ಮರಗಳ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ಉಪವಿಭಾಗದ ಠಾಣಾ ಸರಹದ್ದುಗಳಲ್ಲಿ ಶ್ರೀಗಂಧ ಮರ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ಮತ್ತು
ಜಿ. ಮಂಜುನಾಥ್ ಹಾಗೂ ಚನ್ನಗಿರಿ ಉಪವಿಭಾಗದ ಪ್ರಭಾರ ಉಪಾಧೀಕ್ಷಕರಾದ ಪದ್ಮಶ್ರೀ ಗುಂಜಿಕರ್ ಮತ್ತು ಸಿಪಿಐ ಸಂತೇಬೆನ್ನೂರು ವೃತ್ತ ಲಿಂಗನಗೌಡ ನೆಗಳೂರು ಅವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ ಮತ್ತು ಪಿಎಸ್ಐ ಚನ್ನವೀರಪ್ಪರ ಮುಂದಾಳತ್ವದಲ್ಲಿ ತಂಡ ರಚಿಸಲಾಗಿತ್ತು.
ಸಿಬ್ಬಂದಿಯವರಾದ ವೀರಭದ್ರಪ್ಪ, ರುದ್ರೇಶ್, ಸತೀಶ್, ರಾಘವೇಂದ್ರ, ಸಂತೋಷ್, ನಾಗರಾಜ, ಜಗದೀಶ್, ರೇವಣಸಿದ್ದಪ್ಪ, ಸಂತೋಷ್ ಪಾಟೀಲ್ ರವರನ್ನು ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿತು. ಕಳೆದ 22ರಂದು ಈ ತಂಡವು ಚನ್ನಗಿರಿ ಚಾಲೂಕಿನ ಕೆರೆಬಿಳಚಿ ಕ್ಯಾಂಪ್ ನ ಮಸೀದಿ ಹತ್ತಿರ ವಾಸ ಇದ್ದ ಎಳನೀರು ಕೀಳುವ ಕೆಲಸ ಮಾಡುತ್ತಿದ್ದ ಸಲ್ಮಾನ್ ಖಾನ್ (25)ನನ್ನು ಬಂಧಿಸಿತ್ತು.
ಬಂಧಿತನಿಂದ ಸುಮಾರು 3,15,000 ರೂಪಾಯಿ ಬೆಲೆ ಬಾಳುವ 45 ಕೆಜಿ ಶ್ರೀಗಂಧದ ಮರದ ತುಂಡುಗಳು, ಚೆಕ್ಕೆಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಗರಗಸವನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.
ಆರೋಪಿತನ ಪತ್ತೆಯಿಂದ ಸಂತೇಬೆನ್ನೂರು ಪೊಲೀಸ್ ಠಾಣಾ ಸರಹದ್ದಿನ ಕಾಶೀಪುರ ಕ್ಯಾಂಪಿನ ಅಡಿಕೆ ತೋಟದಲ್ಲಿದ್ದ ಶ್ರೀಗಂಧದ ಮರ ಕಳುವಾದ ಪ್ರಕರಣ, ಚನ್ನಗಿರಿ ಪೊಲೀಸ್ ಠಾಣಾ ಸರಹದ್ದಿನ ಚನ್ನಗಿರಿ ಟೌನ್ ಕೋರ್ಟ್ ಮುಂಭಾಗದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳುವಾದ ಪ್ರಕರಣ ಒಟ್ಟು 2 ಶ್ರೀಗಂಧದ ಮರ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಆರೋಪಿ ಬಂಧಿಸಿ, ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡ ಸಂತೇಬೆನ್ನೂರು ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಪ್ರಶಂಸಿಸಿದ್ದಾರೆ.