ಪಶ್ಚಿಮ ಗೋದಾವರಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಂಚಿನಾಡ ವಸಿಷ್ಠ ಸೇತುವೆಯ ಬಳಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸಾಲದ ಬಾಧೆ ಹಾಗೂ ಆರ್ಥಿಕ ಸಂಕಷ್ಟದಿಂದ ಬೇಸತ್ತ ದಂಪತಿ ತಮ್ಮ 3 ವರ್ಷದ ಮುದ್ದು ಮಗುವನ್ನು ಸ್ಕೂಟರ್ ಮೇಲೆಯೇ ಬಿಟ್ಟು, ಉಕ್ಕಿ ಹರಿಯುತ್ತಿದ್ದ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವೆಲ್ಪುರು ಗ್ರಾಮದ ದೊಡ್ಡ ಸಾಯಿ (29) ಮತ್ತು ಅವರ ಪತ್ನಿ ಶಿರೀಷಾ (28) ನದಿಗೆ ಜಿಗಿದ ದಂಪತಿ ಎಂದು ಗುರುತಿಸಲಾಗಿದೆ. ಗುರುವಾರ ತಡರಾತ್ರಿ ಸುಮಾರು 10 ಗಂಟೆಗೆ ಮಗುವಿನೊಂದಿಗೆ ಸೇತುವೆ ಬಳಿಗೆ ಬಂದ ಇವರು, ಮಗುವನ್ನು ಒಂಟಿಯಾಗಿ ಬಿಟ್ಟು ನದಿಗೆ ಹಾರಿದ್ದಾರೆ.
ಕತ್ತಲಲ್ಲಿ ಪೋಷಕರಿಗಾಗಿ ಅಮ್ಮಾ… ಅಪ್ಪಾ… ಎಂದು ಮಗು ಅಳುತ್ತಿರುವುದನ್ನು ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗುವಿನ ರೋದನ ಕಂಡು ಕಣ್ಣೀರಿಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ರಕ್ಷಿಸಿ ಸಂಬಂಧಿಕರಿಗೆ ಒಪ್ಪಿಸಿದ್ದು, ನದಿಯಲ್ಲಿ ದಂಪತಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಚಿಕ್ಕಮಗುವಿನ ಆಕ್ರೋಶ:
ತಂದೆ-ತಾಯಿ ಕಾಣಿಸದೆ ಕತ್ತಲಲ್ಲಿ, ಚಳಿಯಲ್ಲಿ ನರಕಯಾತನೆ ಅನುಭವಿಸಿದ ಮಗು “ಅಮ್ಮ… ನಾನ್ನಾ…” ಎಂದು ಕಣ್ಣೀರಿಟ್ಟಿದೆ. ಇದನ್ನು ಗಮನಿಸಿದ ಸ್ಥಳೀಯರು ಮಗುವನ್ನು ಸಂತೈಸಿದ್ದಾರೆ.
ಆರ್ಥಿಕ ಮುಗ್ಗಟ್ಟು ಕಾರಣ?
ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬವು ತೀವ್ರ ಸಾಲದ ಬಾಧೆ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಸಾಯಿ ಅವರು ಆಂಬುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಸದ್ಯ ಪೊಲೀಸರು ದಂಪತಿಗಳ ಪತ್ತೆಗಾಗಿ ಎಸ್‌ಡಿಆರ್‌ಎಫ್ (SDRF) ಹಾಗೂ ಈಜುಗಾರರ ಸಹಾಯದಿಂದ ನದಿಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.





Leave a comment