SUDDIKSHANA KANNADA NEWS/ DAVANAGERE/ DATE:24-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ಅಪಸ್ವರ ಎತ್ತಿರುವವರ ಕ್ಯಾಪ್ಟನ್ ಎನಿಸಿಕೊಂಡಿರುವ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರು ಮಾರ್ಚ್ 24ರಂದು ತಾಲೂಕಿನ ಶಿರಮಗೊಂಡನಹಳ್ಳಿಯ ತಮ್ಮ ನಿವಾಸದಲ್ಲಿ ಮಹತ್ವದ ಸಭೆ ಕರೆದಿದ್ದಾರೆ.
ಉನ್ನತ ಮೂಲಗಳ ಮಾಹಿತಿಯ ಪ್ರಕಾರ ಇಂದು ಸಂಜೆ 5 ಗಂಟೆಗೆ ಮೀಟಿಂಗ್ ನಡೆಯಲಿದ್ದು, ಹಲವು ವಿಚಾರಗಳ ಕುರಿತಂತೆ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಗುರುಸಿದ್ದನಗೌಡರು, ಆರೈಕೆ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಶಿವಯೋಗಿ ಸ್ವಾಮಿ, ಬಸವರಾಜ್ ನಾಯ್ಕ್, ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಕೆ. ಎಸ್. ಈಶ್ವರಪ್ಪ ಭೇಟಿ ಬಳಿಕ ಎಸ್ ಎ ಆರ್ ಮೇಲೆ ಒತ್ತಡ..?
ಎಸ್. ಎ. ರವೀಂದ್ರನಾಥ್ ಅವರು ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪರನ್ನು ಭೇಟಿ ಮಾಡಿದ ಬಳಿಕ ಕರೆದಿರುವ ಸಭೆ ಇದಾಗಿದ್ದು, ತುಂಬಾನೇ ಮಹತ್ವ ಪಡೆದುಕೊಂಡಿದೆ. ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಬೇಕೋ ಬೇಡವೋ, ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಬರುತ್ತಿರುವ ಒತ್ತಡ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಒತ್ತಡ ಸೇರಿದಂತೆ ಎಲ್ಲಾ ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.
ಸಂಧಾನಕ್ಕೆ ಬಿ. ಎಸ್. ವೈ. ಎಂಟ್ರಿ…?
ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರೇ ಸಂಧಾನ ನಡೆಸಲು ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಜಿ. ಎಂ. ಸಿದ್ದೇಶ್ವರ ವಿರುದ್ಧ ಬಂಡಾಯ ಎದ್ದಿರುವವರ ಶಮನಕ್ಕೆ ಮುಂದಾಗಿದ್ದಾರೆ, ಹೈಕಮಾಂಡ್ ನಾಯಕರೂ ಸಹ ಭಿನ್ನ ರಾಗ ಎತ್ತಿರುವ ನಾಯಕರನ್ನು ಸಮಾಧಾನಪಡಿಸುವ ಜವಾಬ್ದಾರಿಯನ್ನು ಯಡಿಯೂರಪ್ಪರಿಗೆ ವಹಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ಅವರು ಇದ್ದರೂ ಅವರ ಮಾತಿಗೆ ಅಷ್ಟು ಮನ್ನಣೆ ಸಿಗೋದಿಲ್ಲ.
ಯಾಕೆಂದರೆ ರವೀಂದ್ರನಾಥ್ ಅವರು ಯಡಿಯೂರಪ್ಪರ ಕಾಲದಿಂದಲೂ ಬಿಜೆಪಿ ಕಟ್ಟಿ ಬೆಳೆಸಿದವರು. 50 ವರ್ಷ ರಾಜಕೀಯ ಮಾಡಿದವರು. ಬಿಜೆಪಿಗೆ ಎಂದಿಗೂ ದ್ರೋಹ ಬಗೆದವರಲ್ಲ. ಮಾಜಿ ಶಾಸಕ ಗುರುಸಿದ್ದನಗೌಡರು ಹಿರಿಯರು. ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರೂ ಯಡಿಯೂರಪ್ಪರ ಆಪ್ತರು. ಹಾಗಾಗಿ, ಇವರೆಲ್ಲರನ್ನೂ ಸಮಾಧಾನಪಡಿಸುವುದು ವಿಜಯೇಂದ್ರ ಅವರಿಗೆ ಕಷ್ಟವಾಗಬಹುದು. ಈ ಕಾರಣಕ್ಕೆ ಯಡಿಯೂರಪ್ಪ ಅವರೇ ನೇರ ರಂಗಪ್ರವೇಶ ಮಾಡಿದರೆ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳ ಕುರಿತಂತೆ ರವೀಂದ್ರನಾಥ್ ಅವರು ಬಿಜೆಪಿ ಮುಖಂಡರು, ಕಾರ್ಯಕರ್ತರು, ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.
ಮೊನ್ನೆ ನಡೆದ ಸಭೆಯಲ್ಲಿ ಏನಾಗಿತ್ತು..?
ದಾವಣಗೆರೆ ಬಿಜೆಪಿ ಭೀಷ್ಮ ರವೀಂದ್ರನಾಥ್ ಅವರು ಈಗ ಭಿನ್ನ ಧ್ವನಿಯರ ನೇತೃತ್ವ ವಹಿಸಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಳೆದ ಮೂರು ದಿನಗಳ ಹಿಂದೆ ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆ ಆಗಲೇಬೇಕು ಎಂಬ ಒಂದೇ ವಾಕ್ಯದ ನಿರ್ಣಯ ಅಂಗೀಕರಿಸಲಾಗಿತ್ತು. ಮಾತ್ರವಲ್ಲ, ಬಂಡಾಯ ಅಭ್ಯರ್ಥಿ ಕಣಕ್ಕಿಳಿಸುವ ಕುರಿತಂತೆ ನೇರವಾಗಿ ಹೇಳಲಾಗಿತ್ತು.
ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಮನೆಯಲ್ಲಿ ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಮಾಜಿ ಸಚಿವರು, ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಬಿಜೆಪಿ
ಮುಖಂಡರು ಸೇರಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಮಾತ್ರವಲ್ಲ, ಅಭ್ಯರ್ಥಿ ಬದಲಾಗಲೇಬೇಕು ಎಂಬ ನಿಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದ್ದರು.
ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಾಜಿ ಸಚಿವರಾದ ಎಂ. ಪಿ. ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಗುರುಸಿದ್ದನಗೌಡರು, ಬಸವರಾಜ್ ನಾಯ್ಕ್, ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಅಜಯ್ ಕುಮಾರ್, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್, ಕಲ್ಲೇಶ್ ಸೇರಿದಂತೆ ಹಲವರು ಸಭೆ ಸೇರಿ ಜಿ. ಎಂ. ಸಿದ್ದೇಶ್ವರರ ವಿರುದ್ಧ ಗುಡುಗಿದ್ದರು.
ಮಾಜಿ ಸಚಿವರು, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋಲುಂಡ ಪರಾಜಿತ ಮೂವರು ಅಭ್ಯರ್ಥಿಗಳು, ಕಲ್ಲೇಶಪ್ಪ, ಸುರೇಶ್ ಸೇರಿ ಒಟ್ಟಾಗಿ ತೀರ್ಮಾನ ಮಾಡಿದ್ದೇವೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಬೇಕು ಎಂಬ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯ ನಾಯಕರು, ರಾಷ್ಟ್ರ ನಾಯಕರನ್ನು ಭೇಟಿ ಮಾಡಿ ಹಲವು ಬಾರಿ ಮನವಿ ಮಾಡಿದ್ದೇವೆ. ನಮ್ಮ ಅಭಿಪ್ರಾಯ ಅಲ್ಲ, ಜಿಲ್ಲೆಯ ಮತದಾರರು, ಕಾರ್ಯಕರ್ತರ ಅಭಿಪ್ರಾಯದಂತೆ ತಿಳಿಸಿದ್ದೇವೆ. ಆದ್ರೆ, ಮಾತಿಗೆ ಮನ್ನಣೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಕೇವಲ ಲೋಕಸಭೆ ಚುನಾವಣೆ ಮಾತ್ರವಲ್ಲ, ಮುಂಬರುವ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲಬೇಕು. ಮತ್ತೆ ಬಿಜೆಪಿ ಸಂಘಟಿತವಾಗಬೇಕು. ಬಲಿಷ್ಠವಾಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಮ್ಮದು ಕುಟುಂಬ ವಿರುದ್ಧದ ರಾಜಕಾರಣ ಅಲ್ಲ, ನಡವಳಿಕೆ ಬದಲಾಗಬೇಕು, ದುರಹಂಕಾರಕ್ಕೆ ಬ್ರೇಕ್ ಬೀಳಬೇಕು. ಬಿಜೆಪಿ ಕಟ್ಟಿ ಬೆಳೆಸಿದವರು, ಸಂಘಟನೆ, ಹೋರಾಟ ಮಾಡಿದವರನ್ನು ಕಡೆಗಣಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ದಾವಣಗೆರೆ ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ. ಲೋಕಸಭೆ ಅಭ್ಯರ್ಥಿ ಗೆಲ್ಲಿಸಿಕೊಂಡು ನರೇಂದ್ರ ಮೋದಿ ಕೈ ಬಲಪಡಿಸುತ್ತೇವೆ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬಂತೆ ನಡೆಯುತ್ತೇವೆ ಎಂದು ಸವಾಲು ಹಾಕಲಾಗಿತ್ತು.