ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಗಾಯನವನ್ನು ಮಧ್ಯದಲ್ಲೇ ತಡೆದು ರಾಷ್ಟ್ರಗೀತೆಗೆ ಅಪಮಾನ ಎಸಗಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ ಚಿತ್ತೋರ್ಗಢದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, “ವಂದೇ ಮಾತರಂ ಗೀತೆ ನಡೆಯುತ್ತಿದ್ದಾಗ ಸೋನಿಯಾ ಗಾಂಧಿಯವರು ಅದನ್ನು ನಿಲ್ಲಿಸುವಂತೆ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಿದರು. ಇದನ್ನು ಇಡೀ ದೇಶವೇ ಟಿವಿಯಲ್ಲಿ ನೋಡಿದೆ. ರಾಷ್ಟ್ರಗೀತೆಯನ್ನು ಅಪೂರ್ಣವಾಗಿ ಬಿಡುವುದನ್ನು ಕಲ್ಪಿಸಿಕೊಳ್ಳಲು ಹೇಗೆ ಸಾಧ್ಯ? ಕಾಂಗ್ರೆಸ್ನ ನಾಯಕರು ದೇಶದ ಜನತೆ ಹಾಗೂ ಬಂಕಿಂ ಚಂದ್ರ ಚಟ್ಟೋಪಾಧ್ಯಾಯ ಅವರ ಬಳಿ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸ್ಪಷ್ಟನೆ:
ಈ ಆರೋಪಗಳನ್ನು ತೀವ್ರವಾಗಿ ನಿರಾಕರಿಸಿರುವ ಕಾಂಗ್ರೆಸ್, ರಾಜಕೀಯ ಲಾಭಕ್ಕಾಗಿ ಬಿಜೆಪಿ ಸುಳ್ಳು ವಿವಾದ ಸೃಷ್ಟಿಸುತ್ತಿದೆ ಎಂದಿದೆ. “ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸರಿಯಿಲ್ಲದ ಕಾರಣ, ಅವರಿಗೆ ಕುಳಿತುಕೊಳ್ಳಲು ಕುರ್ಚಿ ತರಿಸುವಂತೆ ಸೋನಿಯಾ ಗಾಂಧಿ ಸನ್ನೆ ಮಾಡಿದ್ದರೆ ವಿನಃ ವಂದೇ ಮಾತರಂ ತಡೆಯಲು ಅಲ್ಲ” ಎಂದು ಕಾಂಗ್ರೆಸ್ ವಕ್ತಾರ ಉದಿತ್ ರಾಜ್ ಸ್ಪಷ್ಟಪಡಿಸಿದ್ದಾರೆ.





Leave a comment