ಲಕ್ನೋ: ಉತ್ತರ ಪ್ರದೇಶದ ಲಕ್ನೋದ ಮಲಿಹಾಬಾದ್‌ನಲ್ಲಿ ಅಪರೂಪದ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಮದುವೆಯಾದ ಒಂದೇ ವರ್ಷಕ್ಕೆ ಪ್ರೇಮಿಯೊಂದಿಗೆ ಓಡಿಹೋಗಿದ್ದ ಪತ್ನಿಯನ್ನು ಹುಡುಕಿ ತಂದ ಗಂಡ, ಆಕೆಯ ಇಷ್ಟದಂತೆ ಪ್ರೇಮಿಯೊಂದಿಗೆ ದೇವಸ್ಥಾನದಲ್ಲಿ ವಿವಾಹ ಮಾಡಿಸಿ ಕಳುಹಿಸಿಕೊಟ್ಟಿದ್ದಾನೆ.
ಘಟನೆಯ ವಿವರ:
ಉತ್ತರ ಪ್ರದೇಶದ ಪ್ರಾಂತೀಯ ರಕ್ಷಕ ದಳದ ಜವಾನನಿಗೆ ಸುಮಾರು ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ, ಆಕೆ ಶಾಲಾ ದಿನಗಳಿಂದಲೂ ತನ್ನ ಸಹಪಾಠಿಯೊಬ್ಬನನ್ನು ಪ್ರೀತಿಸುತ್ತಿದ್ದಳು. ಮನೆಯವರ ಒತ್ತಡಕ್ಕೆ ಮಣಿದು ವಿವಾಹವಾಗಿದ್ದರೂ, ಮದುವೆಯ ನಂತರವೂ ಪ್ರೇಮಿಯೊಂದಿಗೆ ಸಂಪರ್ಕದಲ್ಲಿದ್ದಳು.
ಕೆಲ ದಿನಗಳ ಹಿಂದೆ ಆಕೆ ಗಂಡನ ಮನೆಗೆ ತಿಳಿಸದೆ ಏಕಾಏಕಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಹುಡುಕಾಟ ನಡೆಸಿ, ಮಲಿಹಾಬಾದ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ, ಹರ್ದೋಯ್‌ನಲ್ಲಿ ಪ್ರೇಮಿಯೊಂದಿಗೆ ಇದ್ದ ಮಹಿಳೆಯನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದರು.
ಠಾಣೆಯಲ್ಲಿ ಬುದ್ಧಿವಾದ, ಹಠ ಹಿಡಿದ ಪತ್ನಿ:
ಪೋಲಿಸ್ ಠಾಣೆಯಲ್ಲಿ ಎರಡೂ ಕುಟುಂಬಸ್ಥರು ಹಾಗೂ ಪೊಲೀಸರು ಮಹಿಳೆಗೆ ಗಂಟೆಗಟ್ಟಲೆ ಬುದ್ಧಿವಾದ ಹೇಳಿ ಸಂಸಾರ ಮುಂದುವರಿಸುವಂತೆ ಮನವೊಲಿಸಲು ಯತ್ನಿಸಿದರು. ಆದರೆ ಆಕೆ, “ನನಗೆ ಗಂಡನ ಜೊತೆ ಇರಲು ಇಷ್ಟವಿಲ್ಲ, ಪ್ರೇಮಿ ಜೊತೆಗಷ್ಟೇ ಬಾಳುವೆ” ಎಂದು ಹಠ ಹಿಡಿದು ನಿಂತಳು.
ಪತಿಯ ದೊಡ್ಡತನ:
ಪತ್ನಿಯ ನಿರ್ಧಾರವನ್ನು ಕಂಡ ಪತಿ, ಬಲವಂತವಾಗಿ ಆಕೆಯನ್ನು ತನ್ನೊಂದಿಗೆ ಇಟ್ಟುಕೊಳ್ಳಲು ನಿರಾಕರಿಸಿದನು. “ನಿನ್ನ ಸಂತೋಷವೇ ಮುಖ್ಯ, ಆತನೊಂದಿಗೆ ನಿಷ್ಠೆಯಿಂದ ಬಾಳು” ಎಂದು ಹೇಳಿ ಪರಸ್ಪರ ಸಮ್ಮತಿಯೊಂದಿಗೆ (Mutual Consent) ದಾಂಪತ್ಯಕ್ಕೆ ಅಂತ್ಯಹಾಡಿದರು.
ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ, ಸ್ಥಳೀಯ ದೇವಸ್ಥಾನದಲ್ಲಿ ಹಿಂದೂ ಶಾಸ್ತ್ರೋಕ್ತವಾಗಿ ಪತ್ನಿ ಹಾಗೂ ಆಕೆಯ ಪ್ರೇಮಿಗೆ ಮದುವೆ ಮಾಡಿಸಲಾಯಿತು. ಪತಿಯೇ ನಿಂತು ಮದುವೆ ನೆರವೇರಿಸಿ, ಪತ್ನಿಯನ್ನು ಪ್ರೇಮಿಯೊಂದಿಗೆ ಕಳುಹಿಸಿಕೊಟ್ಟಿರುವುದು ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.





Leave a comment