ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಾಗಿದ್ದ ಅತ್ಯಂತ ಕಠಿಣ ಹಾಗೂ ರೋಚಕ ಕಾರ್ಯಾಚರಣೆಯೊಂದರ ನೆನಪನ್ನು ಹಂಚಿಕೊಂಡಿದ್ದಾರೆ.
ಉತ್ತರಾಖಂಡದ ಐಐಟಿ ರೂರ್ಕಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ 20ರ ಹರೆಯದಲ್ಲಿ ಸಿಕ್ಕಿಂ ಗಡಿಭಾಗದಲ್ಲಿ ನಡೆದ ಅಪರೂಪದ ಘಟನೆಯನ್ನು ವಿವರವಾಗಿ ಹಂಚಿಕೊಂಡರು.
ಸಿಕ್ಕಿಂ ವಿಲೀನದ ಅವಧಿಯ ರಹಸ್ಯ ಮಿಷನ್
1975ರಲ್ಲಿ ಸಿಕ್ಕಿಂ ಭಾರತದೊಂದಿಗೆ ಅಧಿಕೃತವಾಗಿ ವಿಲೀನಗೊಳ್ಳುತ್ತಿದ್ದ ಅವಧಿಯಲ್ಲಿ, ಯುವ ಐಪಿಎಸ್ ಅಧಿಕಾರಿಯಾಗಿದ್ದ ಅಜಿತ್ ಡೋವಲ್ ಅವರನ್ನು ಸಿಕ್ಕಿಂನ ಬೇಹುಗಾರಿಕಾ ಮುಖ್ಯಸ್ಥರನ್ನಾಗಿ ನಿಯೋಜಿಸಲಾಗಿತ್ತು. ಆ ಸಮಯದಲ್ಲಿ ಗಡಿಭಾಗದ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪಡೆಯ ಚಲನವಲನಗಳ ಕುರಿತು ನಿಖರ ಮಾಹಿತಿ ಸಂಗ್ರಹಿಸುವುದು ಅವರ ಮುಖ್ಯ ಹೊಣೆಗಾರಿಕೆಯಾಗಿತ್ತು.
ಈ ಪ್ರಕ್ರಿಯೆಯ ಭಾಗವಾಗಿ, ಡೋವಲ್ ಅವರು ಗಡಿಭಾಗದ ರಹಸ್ಯ ಮಾಹಿತಿ ಸಂಗ್ರಹಕ್ಕಾಗಿ ಭಾರತೀಯ ಬೇಹುಗಾರಿಕಾ ತಂಡವೊಂದನ್ನು ಕಳುಹಿಸಿದ್ದರು. ನಿಯೋಜಿತ ಯೋಜನೆಯಂತೆ ಈ ತಂಡವು ಕಾರ್ಯಾಚರಣೆ ಮುಗಿಸಿ 8 ದಿನಗಳಲ್ಲಿ ವಾಪಸ್ ಬರಬೇಕಿತ್ತು. ಆದರೆ, 8 ದಿನಗಳು ಕಳೆದು, 10, 15 ದಿನಗಳಾದರೂ ತಂಡದ ಯಾವುದೇ ಸುಳಿವು ಸಿಗಲಿಲ್ಲ. ಗಡಿಭಾಗದಲ್ಲಿ ಹಿಮಪಾತ ಅಥವಾ ಯಾವುದೇ ನೈಸರ್ಗಿಕ ವಿಕೋಪ ಸಂಭವಿಸಿದ ವರದಿಯೂ ಇರಲಿಲ್ಲ. ಇದರಿಂದಾಗಿ ತಂಡದಲ್ಲಿದ್ದ ಅಧಿಕಾರಿಗಳ ಜೀವದ ಬಗ್ಗೆ ಡೋವಲ್ ಅವರಿಗೆ ತೀವ್ರ ಆತಂಕ ಎದುರಾಯಿತು.
ಚೀನಾ ಸೇನೆಯ ವಶಕ್ಕೆ ಸಿಲುಕಿದ್ದ ಭಾರತೀಯ ಏಜೆಂಟರು
ಸ್ಥಿತಿ ಗಂಭೀರವಾಗುತ್ತಿದ್ದಂತೆ, ದೆಹಲಿಯ ಪ್ರಧಾನ ಕಚೇರಿಯಿಂದ ದೋವಲ್ ಅವರಿಗೆ ಕರೆ ಬಂತು. ಉನ್ನತಾಧಿಕಾರಿಗಳು “ನೀವು ಗಡಿ ದಾಟಿ ಜನರನ್ನು ಕಳುಹಿಸಿದ್ದೀರಾ?” ಎಂದು ವಿಚಾರಿಸಿದಾಗ, ಡೋವಲ್ ಅವರು ತಂಡವು ಶೀಘ್ರವೇ ಹಿಂತಿರುಗಬೇಕಿತ್ತು ಎಂದು ವಿವರಿಸಿದರು. ಆಗ ಕಚೇರಿಯಿಂದ ಬಂದ ಮಾಹಿತಿ ದೋವಲ್ ಅವರ ನಿದ್ದೆಗೆಡಿಸಿತು. ಭಾರತದ ಇಡೀ ಬೇಹುಗಾರಿಕಾ ತಂಡವನ್ನು ಚೀನಾ ಸೇನೆಯು ಗಡಿಯ ಬಳಿ ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದೆ ಎಂಬ ಸತ್ಯ ಬಹಿರಂಗವಾಯಿತು.
ಕೆಲ ದಿನಗಳ ನಂತರ, ಎರಡೂ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆ ಅಥವಾ ರಹಸ್ಯ ಒಪ್ಪಂದದ ಫಲವಾಗಿ ಚೀನಾ ಸೇನೆಯು ಭಾರತೀಯ ಏಜೆಂಟರನ್ನು ಬಿಡುಗಡೆ ಮಾಡಿತು. ಆದರೆ ಹಿಂತಿರುಗಿದ ಅಧಿಕಾರಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದರು.
‘ನನ್ನ ವೃತ್ತಿಜೀವನ ಮುಗಿಯಿತು ಎಂದೇ ಭಾವಿಸಿದೆ’
ಈ ಘಟನೆಯ ನಂತರ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಯಿತು. ಆ ಸಮಯದಲ್ಲಿ ತಮ್ಮ 20ರ ಹರೆಯದಲ್ಲಿದ್ದ ದೋವಲ್ ಅವರಿಗೆ ಈ ವೈಫಲ್ಯ ದೊಡ್ಡ ಆಘಾತ ನೀಡಿತು. “ನನ್ನ ವೃತ್ತಿಜೀವನ ಇಲ್ಲಿಗೇ ಮುಗಿಯಿತು, ನಾನು ಹೊಸ ವೃತ್ತಿಯನ್ನು ಹುಡುಕಿಕೊಳ್ಳಬೇಕು ಎಂದು ಭಾವಿಸಿದ್ದೆ. ಇದನ್ನು ಅತ್ಯಂತ ಅಸಫಲ ಹಾಗೂ ಅಪವೃತ್ತಿಪರ ಘಟನೆ ಎಂದು ನಾನೇ ಸ್ವತಃ ಜರೆದುಕೊಂಡಿದ್ದೆ” ಎಂದು ಡೋವಲ್ ಆ ದಿನಗಳನ್ನು ನೆನಪಿಸಿಕೊಂಡರು.
ಆದರೆ, ತನಿಖೆಯ ವರದಿ ಬಂದಾಗ ದೋವಲ್ ಅವರಿಗೆ ಬಿಡುಗಡೆಯ ನಿಟ್ಟುಸಿರು ಸಿಕ್ಕಿತು. ತನಿಖಾ ತಂಡವು ಪ್ರಧಾನ ಕಚೇರಿಯಿಂದ ಡೋವಲ್ ಅವರ ತಂಡಕ್ಕೆ ನೀಡಲಾಗಿದ್ದ ಗಡಿಭಾಗದ ಭೂಪಟಗಳು ಮತ್ತು ರೇಖಾಚಿತ್ರಗಳಲ್ಲೇ ತಾಂತ್ರಿಕ ದೋಷಗಳಿದ್ದವು ಎಂಬುದನ್ನು ಪತ್ತೆಹಚ್ಚಿತು. ಹೀಗಾಗಿ ದೋವಲ್ ಅವರ ಕಡೆಯಿಂದ ಯಾವುದೇ ತಪ್ಪಾಗಿಲ್ಲ ಎಂದು ಅವರಿಗೆ ನಿಷ್ಕಲಂಕ ಪ್ರಮಾಣಪತ್ರ ನೀಡಲಾಯಿತು.
ಟಿಬೆಟಿಯನ್ ಶೆರ್ಪಾ ನೀಡಿದ ‘ಜೀವನ ಪಾಠ’
ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದರೂ, ಈ ಘಟನೆಯು ದೋವಲ್ ಅವರನ್ನು ತೀವ್ರ ನಿರಾಶೆಗೆ ತಳ್ಳಿತ್ತು. ಆ ಸಮಯದಲ್ಲಿ ಐಬಿ ಸಂಸ್ಥೆಯಲ್ಲಿ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಟಿಬೆಟಿಯನ್ ಶೆರ್ಪಾರೊಬ್ಬರು ನೀಡಿದ ಸಲಹೆ ಡೋವಲ್ ಅವರ ಇಡೀ ಜೀವನದ ದೃಷ್ಟಿಕೋನವನ್ನೇ ಬದಲಾಯಿಸಿತು.
ಹಿಮಾವೃತ ಪರ್ವತಗಳಲ್ಲಿ ವರ್ಷಗಟ್ಟಲೆ ಅನುಭವವಿದ್ದ ಆ ಶೆರ್ಪಾ, ಡೋವಲ್ ಅವರಿಗೆ ಧೈರ್ಯ ತುಂಬುತ್ತಾ— “ಸರ್, ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲ, ಇದೆಲ್ಲವೂ ಭೂಪಟವನ್ನು ಓದುವ ವಿಧಾನಕ್ಕೆ ಸಂಬಂಧಿಸಿದ್ದು. ಜೀವನದಲ್ಲಿ ಕೆಲವರು ಮ್ಯಾಪ್ ಅನ್ನು ಸರಿಯಾಗಿ ಓದುತ್ತಾರೆ, ಇನ್ನು ಕೆಲವರು ತಪ್ಪಾಗಿ ಓದುತ್ತಾರೆ” ಎಂದು ಹೇಳಿದರು. ಅದರೊಂದಿಗೆ ಅವರು ನೀಡಿದ ಮೂರು ಸುವರ್ಣ ಸೂತ್ರಗಳು ಡೋವಲ್ ಅವರ ಭವಿಷ್ಯದ ದಾರಿದೀಪವಾದವು:
ನೀವು ಪ್ರಸ್ತುತ ಎಲ್ಲಿದ್ದೀರಿ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ
ನೀವು ಎಲ್ಲಿಗೆ ತಲುಪಬೇಕು ಎಂಬುದರ ಸ್ಪಷ್ಟತೆ ಇರಲಿ
ಅಲ್ಲಿಗೆ ತಲುಪಲು ಸೂಕ್ತ ಮಾರ್ಗವನ್ನು ಕಂಡುಕೊಳ್ಳಿ
ಇಂದು ಭಾರತದ ಅತ್ಯಂತ ಶಕ್ತಿಶಾಲಿ ಹಾಗೂ ಯಶಸ್ವಿ ರಕ್ಷಣಾ ತಂತ್ರಜ್ಞರಾಗಿ ಬೆಳೆದಿರುವ ಅಜಿತ್ ದೋವಲ್ ಅವರು, 2014ರಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಾಕೋಟ್ ವೈಮಾನಿಕ ದಾಳಿ ಹಾಗೂ 2025ರ ಸಿಂಧೂರ್ ಕಾರ್ಯಾಚರಣೆಗಳ ಯಶಸ್ಸಿನ ಹಿಂದೆ ಈ ಮೂರು ಮಾರ್ಗದರ್ಶಿ ಸೂತ್ರಗಳೇ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಹೆಮ್ಮೆಯಿಂದ ಸ್ಮರಿಸಿದರು.





Leave a comment