ಕೆನ್ಯಾ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಆಫ್ರಿಕಾದ ದೂರದ ಗ್ರಾಮವೊಂದರಲ್ಲಿ ಅನಿರೀಕ್ಷಿತವಾಗಿ ಚಿನ್ನ ಸಿಕ್ಕಿರುವ ಘಟನೆ ವೈರಲ್ ಆಗಿದೆ. ಕೆನ್ಯಾದ ವೆಸ್ಟ್ ಪೋಕೋಟ್ ಕೌಂಟಿಯ ಚೆಪೊರೊರ್ಗ್ರಾಮದಲ್ಲಿ ಸಾವಿರಾರು ಜನರು ಚಿನ್ನದ ಹುಡುಕಾಟಕ್ಕಾಗಿ ಮುಗಿಬಿದ್ದಿದ್ದಾರೆ.
ಗ್ರಾಮದ ಆಡು ಕಾಯುವ ರೈತ ಮನಾಸ್ಸೆ ಲೊಮಾಚಾರ್ (33) ಎಂಬುವವರು ಕಾಣೆಯಾದ ತಮ್ಮ ಆಡನ್ನು ಹುಡುಕುತ್ತಿದ್ದಾಗ ನದಿ ಪಾತ್ರದಲ್ಲಿ ಮಹಿಳೆಯರು ಚಿನ್ನ ಶೋಧಿಸುತ್ತಿರುವುದನ್ನು ಗಮನಿಸಿದ್ದಾರೆ.
ಅವರೊಂದಿಗೆ ಸೇರಿಕೊಂಡ ಈ ವ್ಯಕ್ತಿಗೆ 3 ಗ್ರಾಂ ತೂಕದ ಚಿನ್ನದ ತುಣುಕು ಸಿಕ್ಕಿದೆ. ಇದನ್ನು ಅವರು 36,000 ಕೆನ್ಯಾದ ಶಿಲಿಂಗ್ಗಳಿಗೆ (ಭಾರತೀಯ ರೂಪಾಯಿಗಳಲ್ಲಿ ಅಂದಾಜು 26,615 ರೂ.) ಮಾರಾಟ ಮಾಡಿದ್ದಾರೆ.
ಈ ಸುದ್ದಿ ಸಾಮಾಜಿಕ ಜಾಲತಾಣಗಳು ಮತ್ತು ಸ್ಥಳೀಯವಾಗಿ ಹಬ್ಬುತ್ತಿದ್ದಂತೆ, ಕೆನ್ಯಾ ಹಾಗೂ ನೆರೆಯ ಉಗಾಂಡಾದಿಂದ ಸುಮಾರು 10,000ಕ್ಕೂ ಅಧಿಕ ಜನರು ಗ್ರಾಮಕ್ಕೆ ಲಗ್ಗೆ ಇಟ್ಟಿದ್ದಾರೆ.
ಈ ಹಠಾತ್ ಜನಸಂದಣಿಯಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಸಮಸ್ಯೆ ತಲೆದೋರಿದ್ದು, ಸ್ಥಳೀಯವಾಗಿ ಆಹಾರ ಹಾಗೂ ದಿನಸಿ ಪದಾರ್ಥಗಳ 200ಕ್ಕೂ ಹೆಚ್ಚು ಹೊಸ ವ್ಯಾಪಾರಗಳು ಆರಂಭವಾಗಿವೆ.
ಆದಾಗ್ಯೂ, ಇಲ್ಲಿ ಸಿಗುತ್ತಿರುವುದು ನಿಜವಾದ ಚಿನ್ನವೇ ಅಥವಾ ಇದರ ನಿಕ್ಷೇಪ ಎಷ್ಟಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಅಧಿಕೃತ ಖಚಿತತೆ ಸಿಗಬೇಕಿದೆ.





Leave a comment