SUDDIKSHANA KANNADA NEWS/ DAVANAGERE/ DATE:17-02-2025
ದಾವಣಗೆರೆ: ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್. ಒಂದು ಕ್ವಿಂಟಲ್ ಅಡಿಕೆ ಧಾರಣೆ 52 ಸಾವಿರ ರೂಪಾಯಿ ಗಡಿ ದಾಟಿದೆ. ಈ ವರ್ಷದಲ್ಲಿ ದಾಖಲಿಸಿರುವ ಅತ್ಯಧಿಕ ದರ.
ಕಳೆದೆರಡು ತಿಂಗಳಿನಿಂದಲೂ ಹಾವು ಏಣಿ ಆಟ ಆಡುತ್ತಿದ್ದ ಅಡಿಕೆ ಧಾರಣೆ 47 ಸಾವಿರ ರೂಪಾಯಿಗೆ ಕುಸಿದಿತ್ತು. ಆದ್ರೆ, ಈಗ ಪ್ರತಿ ಕ್ವಿಂಟಲ್ ಅಡಿಕೆ 52 ಸಾವಿರ ರೂಪಾಯಿ ಗಡಿ ದಾಟುವ ಮೂಲಕ ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿದೆ.
ಗರಿಷ್ಠ ಬೆಲೆ 52 ಸಾವಿರ 400 ರೂಪಾಯಿ ಇದ್ದರೆ, ಕನಿಷ್ಠ ಬೆಲೆ 35,200 ರೂಪಾಯಿ ದಾಖಲಿಸಿದೆ. ಸರಾಸರಿ 48183 ರೂಪಾಯಿ ದಾಖಲಾಗಿದ್ದು, ಬೆಟ್ಟೆ ಅಡಿಕೆ ದರ 28,187 ರೂಪಾಯಿ ಗರಿಷ್ಠ ಇದ್ದರೆ, ಕನಿಷ್ಠ ಬೆಲೆ 24,436 ರೂಪಾಯಿ
ಇದೆ. ಸರಾಸರಿ ಧಾರಣೆ 26,194 ರೂಪಾಯಿ ಆಗಿದೆ.
ಚನ್ನಗಿರಿಯು ಅಡಿಕೆ ಮಾರುಕಟ್ಟೆಯಲ್ಲಿ ಈ ದರ ದಾಖಲಾಗಿದ್ದು, ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯನ್ನು ಪ್ರಮುಖವಾಗಿ ಚನ್ನಗಿರಿ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ದಾವಣಗೆರೆ, ಹರಿಹರ, ಹೊನ್ನಾಳಿ, ಮಾಯಕೊಂಡ, ಜಗಳೂರು ತಾಲೂಕಿನಲ್ಲಿ ಈಗ ಹೆಚ್ಚಾಗಿ ಅಡಿಕೆ ಬೆಳೆಯುತ್ತಿದ್ದಾರೆ.
ಜನವರಿ ತಿಂಗಳ ಕೊನೆಯಲ್ಲಿ ಅಡಿಕೆ ಧಾಣೆ 52 ಸಾವಿರ ರೂಪಾಯಿ ಗಡಿ ದಾಟಿ ಮತ್ತೆ ಇಳಿಕೆ ಕಂಡಿತ್ತು. 2023ರ ಜುಲೈ ತಿಂಗಳಿನಲ್ಲಿ ಗರಿಷ್ಠ ಧಾರಣೆ ದಾಖಲಾಗಿದ್ದು ಬಿಟ್ಟರೆ ಮತ್ತೆ ಏರಿಕೆ ಕಂಡಿರಲಿಲ್ಲ. ಆಗ ಕ್ವಿಂಟಲ್ ಗೆ ಬರೋಬ್ಬರಿ 57 ಸಾವಿರ ರೂಪಾಯಿ ದಾಖಲಾಗಿತ್ತು. ಕಳೆದ ವರ್ಷ ಮೇ ತಿಂಗಳಿನಲ್ಲಿ 55 ಸಾವಿರ ರೂಪಾಯಿ ಅಡಿಕೆ ಧಾರಣೆ ಇತ್ತು. ಆದ್ರೆ, ಈ ವರ್ಷದಲ್ಲಿ ಇದೇ ಗರಿಷ್ಠ ಧಾರಣೆ.