SUDDIKSHANA KANNADA NEWS/ DAVANAGERE/ DATE:17-03-2024
ದಾವಣಗೆರೆ: ಹರಿಹರ ಬೈಪಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ 48ರ ಹನಗವಾಡಿ ಸೇತುವೆ ಬಳಿ ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ
ದುರ್ಮರಣಕ್ಕೀಡಾದ ಘಟನೆ ಶನಿವಾರ ಸಂಜೆ ನಡೆದಿದೆ.
ದಾವಣಗೆರೆ ತಾಲೂಕಿನ ಬಾತಿ ಗ್ರಾಮದ ರಾಕೇಶ್ (22) ಹಾಗೂ ಆಕಾಶ್ (23) ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.
ಬೈಕ್ ನಲ್ಲಿ ಹರಿಹರ ಬೈಪಾಸ್ ಕಡೆಯಿಂದ ಕುಮಾರಪಟ್ಟಣದ ಕಡೆಗೆ ರಾಕೇಶ್ ಹಾಗೂ ಆಕಾಶ್ ತೆರಳುತ್ತಿದ್ದರು. ಈ ವೇಳೆ ಬೈಕ್ ಗೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿಯು ಡಿಕ್ಕಿ ಹೊಡೆದಿದೆ. ಚಾಲಕನ ಅಜಾಗರೂಕತೆ ಹಾಗೂ ಅತಿ ವೇಗವಾಗಿ ಬಂದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಹರ ಸರ್ಕಾರಿ ಆಸ್ಪತ್ರೆಗೆ ಶವ ಸಾಗಿಸಲಾಗಿದ್ದು, ಹರಿಹರ ಗ್ರಾಮಾಂಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬದುಕಿ ಬಾಳಬೇಕಿದ್ದ ಯುವಕರಿಬ್ಬರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಬಾತಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಕುಟುಂಬದವರು, ಸ್ನೇಹಿತರು, ಬಂಧುಬಳಗದವರ ಆಕ್ರಂದನ ಮುಗಿಲು ಮುಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ್ಗೆ ಅಪಘಾತ ಸಂಭವಿಸುತ್ತಿದ್ದು, ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು. ವೇಗವಾಗಿ ಬರುವ ಲಾರಿಗಳಿಗೆ ದಂಡ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.