ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್ ಆಮಿರ್ ಖಾನ್ (61) ಅವರು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ (47) ಅವರೊಂದಿಗೆ ಜುಲೈ 5ರಂದು ಸರಳವಾಗಿ ವಿವಾಹವಾಗಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮನೆಯಲ್ಲೇ ಸರಳ ಮದುವೆ:
ಮೂಲಗಳ ಪ್ರಕಾರ, ಈ ವಿವಾಹ ಮಹೋತ್ಸವವು ಆಮಿರ್ ಖಾನ್ ಅವರ ಮುಂಬೈನ ನಿವಾಸದಲ್ಲಿ ಅತ್ಯಂತ ಖಾಸಗಿಯಾಗಿ ನಡೆಯಲಿದೆ. ಯಾವುದೇ ಅದ್ಧೂರಿ ಆಚರಣೆಗಳಿಲ್ಲದೆ, ಕೇವಲ ರಿಜಿಸ್ಟರ್ಡ್ ಮ್ಯಾರೇಜ್ (ನೋಂದಾಯಿತ ವಿವಾಹ) ಮೂಲಕ ಇಬ್ಬರೂ ಒಂದಾಗಲಿದ್ದಾರೆ. ಈ ಸಮಾರಂಭದಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ.
ಸಲ್ಮಾನ್, ಶಾರುಖ್ ಭಾಗಿ ಸಾಧ್ಯತೆ?
ಮದುವೆಗೆ ಹೆಚ್ಚಿನ ಜನರನ್ನು ಆಹ್ವಾನಿಸದಿದ್ದರೂ, ಬಾಲಿವುಡ್‌ನ ಸೂಪರ್‌ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ಆಮಿರ್ ಖಾನ್ ಅವರ ಆಪ್ತ ಸ್ನೇಹಿತರಾಗಿರುವುದರಿಂದ, ಸಮಯಾವಕಾಶದ ಲಭ್ಯತೆ ಆಧರಿಸಿ ಈ ಖಾಸಗಿ ಸಮಾರಂಭಕ್ಕೆ ಹಾಜರಾಗುವ ಸಾಧ್ಯತೆಯಿದೆ ಎಂದು ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ.
ಯಾರು ಈ ಗೌರಿ ಸ್ಪ್ರ್ಯಾಟ್?
ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಅವರು ಈ ಹಿಂದೆ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ಇವರಿಗೆ ಮೊದಲ ಮದುವೆಯಿಂದ ಕ್ವಿನ್ ಹೆಸರಿನ 7 ವರ್ಷದ ಮಗನಿದ್ದಾನೆ. ವಿಶೇಷವೆಂದರೆ, ಗೌರಿ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಬ್ರಿಟಿಷ್ ಮೂಲದ ಕಮ್ಯುನಿಸ್ಟ್ ಮುಖಂಡ ಫಿಲಿಪ್ ಸ್ಪ್ರ್ಯಾಟ್ ಅವರ ಮೊಮ್ಮಗಳಾಗಿದ್ದಾರೆ.
ಕಳೆದ ವರ್ಷ ಆಮಿರ್ ಖಾನ್ ಅವರು ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಗೌರಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿ, ತಮ್ಮ ರಿಲೇಶನ್‌ಶಿಪ್ ಅನ್ನು ಅಧಿಕೃತಗೊಳಿಸಿದ್ದರು. ಆಮಿರ್ ಖಾನ್ ಅವರಿಗೆ ಇದು ಮೂರನೇ ಮದುವೆಯಾಗಿದ್ದು, ಈ ಹಿಂದೆ ರೀನಾ ದತ್ತಾ ಹಾಗೂ ಕಿರಣ್ ರಾವ್ ಅವರನ್ನು ವಿವಾಹವಾಗಿ ಬಳಿಕ ವಿಚ್ಛೇದನ ಪಡೆದಿದ್ದರು. ಈ ಹೊಸ ನಿರ್ಧಾರಕ್ಕೆ ಎರಡೂ ಕುಟುಂಬಸ್ಥರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ





Leave a comment