SUDDIKSHANA KANNADA NEWS/ DAVANAGERE/ DATE:13-02-2025
ದಾವಣಗೆರೆ: ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಬೃಹತ್ ಅಂತರಾಷ್ಟ್ರೀಯ ಶಿಕ್ಷಣ ಮೇಳವನ್ನು ನಗರದ ಜಿಎಂ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಲಾಗಿತ್ತು.
ಮೇಳಕ್ಕೆ ಜಿಎಂ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ. ಹೆಚ್.ಡಿ. ಮಹೇಶಪ್ಪ, ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್. ಸೇರಿದಂತೆ ಅತಿಥಿ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಡಾ. ಹೆಚ್.ಡಿ. ಮಹೇಶಪ್ಪ, ಯಾವುದೇ ವಿಶ್ವವಿದ್ಯಾಲಯವಿದ್ದರೂ, ಅದರ ಗುಣಮಟ್ಟವೇ ಪ್ರಾಮುಖ್ಯ. ಆದ್ದರಿಂದ, ಕ್ರಮಾಂಕಗಳ ಬಗ್ಗೆ ಊಹೆಗಳನ್ನು ಮಾಡುವುದು ಸಹಜ. ಆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕ್ರಮಾಂಕವೇ ಮುಖ್ಯ ಅಂಶವಲ್ಲ. ಕ್ರಮಾಂಕಗಳು ಇರುತ್ತವೆ, ಆದರೆ ಪರಸ್ಪರ ಜನಪ್ರಿಯತೆ ಇರುವ ಅನಿವಾರ್ಯತೆಯಿಲ್ಲ. ಈ ಎಲ್ಲದಕ್ಕೂ ಮಿಗಿಲಾಗಿ, ಗುಣಮಟ್ಟವೇ ಬಹು ಮುಖ್ಯ ಎಂದು ತಿಳಿಸಿದರು.
ಉನ್ನತ ಅಧ್ಯಯನವನ್ನು ಮುಂದುವರಿಸಲು ಅತ್ಯುತ್ತಮ ಮಾರ್ಗವೆಂದರೆ, ಕ್ಯಾಂಪಸ್ ಅನುಭವಿಸುವ ಆರಾಮತೆ ಹಾಗೂ ಸುರಕ್ಷತೆ. ಇದು ನಿಮ್ಮ ಶೈಕ್ಷಣಿಕ ಜೀವನದಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದ ಅವರು, ಅನೇಕ ವಿದ್ಯಾರ್ಥಿಗಳಿಗೆ ವಿದೇಶ ಉನ್ನತ ಶಿಕ್ಷಣದ ಬಗ್ಗೆ ತಿಳಿಯುವ ಕುತೂಹಲ ಮತ್ತು ಸೇರ ಬಯಸುವ ಆಸಕ್ತಿ ಇದ್ದು, ಅಂತಹ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಮೇಳವು ಸಹಕಾರಿಯಾಗಲಿದೆ ಎಂದು ಹೇಳಿದರು.
ಡಾ. ಸುನಿಲ್ ಕುಮಾರ್ ಬಿ.ಎಸ್. ಮಾತನಾಡಿ, ಈ ಮೇಳದಲ್ಲಿ ಸಿಗುವ ಮಾಹಿತಿಯು ನಿಮಗೆ ಬಹಳಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ. ಹಾಗೆಯೇ ನಿಮ್ಮ ನಿರ್ಧಾರಗಳನ್ನು ಸೂಕ್ತವಾಗಿ ತೆಗೆದುಕೊಳ್ಳಬಹುದು. ಮುಖ್ಯವಾಗಿ, ವಿಶ್ವವಿದ್ಯಾಲಯದಿಂದ ನಿಮಗೆ ಸದಾ ಬೆಂಬಲ ದೊರೆಯುತ್ತದೆ. ಆದ್ದರಿಂದ, ನೀವು ತೆಗೆದುಕೊಳ್ಳುವ ಯಾವುದೇ ನಿರ್ಧಾರದ ಕುರಿತು ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ನೀವು ತೆಗೆದುಕೊಳ್ಳುವ ನಿರ್ಧಾರವನ್ನು ಇನ್ನಷ್ಟು ಸಮರ್ಪಕ ಮತ್ತು ಪರಿಪೂರ್ಣವಾಗಿಸುತ್ತದೆ. ಇದು ಒಂದು ಅದ್ಭುತ ಅವಕಾಶ ಎಂದರು.
ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರೀಶ್ ಬೋಳಕಟ್ಟಿ ಮಾತನಾಡಿ, ಪಾಸಿಟಿವ್ (ಧನಾತ್ಮಕತೆ) ತುಂಬಾ ಮುಖ್ಯ. ನಿರ್ಧಾರವನ್ನು ತೆಗೆದುಕೊಳ್ಳಲು ಸರಿಯಾದ ಸಮಯ. ನೀವು ವಿಶಾಲ ದೃಷ್ಟಿಕೋನದಿಂದ ಯೋಚಿಸಬೇಕು ಎಂದಾದರೆ, ಖಂಡಿತವಾಗಿಯೂ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ನಿಮ್ಮ ಯೋಚನೆಗೀ ವಿಧಾನವೂ ಸಂಪೂರ್ಣವಾಗಿ ಬದಲಾಗುತ್ತದೆ. ಜ್ಞಾನ ಪಡೆಯಲು ದೇಶ ಸುತ್ತು ಕೋಶ ಓದು ಎಂಬ ಹಿರಿಯರ ಮಾತಿದೆ. ಅಂತೆಯೇ ಜ್ಞಾನ ಪಡೆಯಲು ಎಷ್ಟು ಶಿಕ್ಷಣ ಪಡೆದರೂ ಸಾಲದು. ಅದು ನಿರಂತರವಾಗಿರಬೇಕು ಎಂದರು.
ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಶಿಕ್ಷಣ ಮೇಳ ನಡೆಯಿತು. ಒಟ್ಟು 500 ಕ್ಕೂ ಹೆಚ್ಚು ನೋಂದಣಿ ಮಾಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅರಿಝೋನ ಸ್ಟೇಟ್ ಯೂನಿವರ್ಸಿಟಿ, ಪೇಸ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ಕನೆಕ್ಟಿಕಟ್, ಯೂನಿವರ್ಸಿಟಿ ಆಫ್ ಒರಿಗಾನ್, ಸೈಮ್ಮನ್ಸ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ಅಕ್ರೋನ್, ಹಲ್ಟ್ ಯೂನಿವರ್ಸಿಟಿ, ಡ್ರೆಕ್ಸಲ್ ಯೂನಿವರ್ಸಿಟಿ, ಟೆಂಪಲ್ ಯೂನಿವರ್ಸಿಟಿ, ಮೈಮಿ ಯೂನಿವರ್ಸಿಟಿ ಸೇರಿದಂತೆ ವಿವಿಧ ದೇಶದ ವಿಶ್ವವಿದ್ಯಾಲಯದ ತಜ್ಞರು ಆಗಮಿಸಿದ್ದರು. ಶಿಕ್ಷಣ ಸಾಲಕ್ಕಾಗಿ ಆಕ್ಸಿಲ್ಲೋ ಅಂಡ್ ಐಡಿಎಫ್ ಸಿ ಬ್ಯಾಂಕ್ ನಿಂದ ಆಗಮಿಸಿದ್ದರು.
ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ, ಪ್ರವೇಶ ಪರೀಕ್ಷೆ, ಸ್ಕಾಲರ್ಶಿಪ್ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಜು ಟ್ರಸ್ಟ್ ಸಂಸ್ಥೆಯ ಸಿಇಓ ಅರುಣ್ ಪ್ರಸಾದ್, ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಸವಿತಾ ಅರಣ್, ಜಿಎಂಯು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಟಿ.ಆರ್. ತೇಜಸ್ವಿ ಕಟ್ಟಿಮನಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ ಗಳು, ನಿರ್ದೇಶಕರು, ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.