SUDDIKSHANA KANNADA NEWS/ DAVANAGERE/ DATE:08-01-2024
ದಾವಣಗೆರೆ: ನಾವು ಕರಸೇವಕರು ನಮ್ಮನ್ನು ಬಂಧಿಸಿ ಅಭಿಯಾನ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಪಿ.ಜೆ.ಬಡಾವಣೆಯ ಶ್ರೀರಾಮ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು, ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಹಲವರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು.
ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಟಿ. ಜಿ. ರವಿಕುಮಾರ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ. ಜಿ. ಅಜಯ್ ಕುಮಾರ್ ಸೇರಿದಂತೆ ಹಲವರನ್ನು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿ, ಆ ನಂತರ ಬಿಡುಗಡೆ ಮಾಡಿದರು.
ನಗರದ ಪಿ.ಜೆ.ಬಡಾವಣೆಯ ಶ್ರೀರಾಮ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಕರಸೇವಕರು, ಹಿಂದೂ ಮುಖಂಡರು, ಕಾರ್ಯಕರ್ತರು, ಶ್ರೀರಾಮನ ಭಕ್ತರು ಸೇರಿದಂತೆ ನೂರಾರು ಮಂದಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಲ್ನಡಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಬಡಾವಣೆ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡರು. ಪೊಲೀಸರ ಜೊತ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಾತ್ರವಲ್ಲ, ಈ ವೇಳೆ ಹೈಡ್ರಾಮಾವೇ ನಡೆದು ಹೋಯಿತು.
ನಾವು ಭಯೋತ್ಪಾದಕರಲ್ಲ, ಶಾಂತಪ್ರಿಯರು. ಹಿಂದೂಗಳು. ಕಾನೂನು ಕೈಗೆತ್ತಿಕೊಳ್ಳದೇ ಶಾಂತಿಯುತವಾಗಿ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತಿದ್ದೇವೆ. ತಾಕತ್ತಿದ್ದರೆ ನಮ್ಮನ್ನು ಸರ್ಕಾರ ಬಂಧಿಸಲಿ ಎಂದು ಸವಾಲು ಹಾಕಿದ್ದೆವು. ಅದರಂತೆ ಪ್ರತಿಭಟನೆ ನಡೆಸುತ್ತಿದ್ದೇವೆ. ಪೊಲೀಸರು ನಮ್ಮನ್ನು ಬಂಧಿಸಿದರೆ ಹೆದರುವುದಿಲಲ್ ಎಂದು ಪ್ರತಿಭಟನಾಕಾರರು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದ್ದು, ತಾಲಿಬಾನ್ ಆಡಳಿತ ನಡೆಸುತ್ತಿದೆ, ತುಘಲಕ್ ದರ್ಬಾರ್ ಸರ್ಕಾರ ಇದು. ಸಿದ್ದರಾಮಯ್ಯನವರು ಕರಸೇವಕರು, ಶ್ರೀರಾಮನ ಭಕ್ತರು ಕ್ರಿಮಿನಲ್ಸ್ ಅಂತಾರೆ. ಡಿ. ಕೆ. ಶಿವಕುಮಾರ್ ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ ಗಲಭೆಕೋರರು ಅಮಾಯಕರು, ಸಹೋದರರು ಎನ್ನುತ್ತಾರೆ. ಇಂಥ ಕೆಟ್ಟ ಸರ್ಕಾರ ರಾಜ್ಯದಲ್ಲಿದೆ. ಹಿಂದೂಗಳ ವಿರೋಧಿ ಸರ್ಕಾರ ಆಗಿದ್ದು, ಇದು ತೊಲಗಬೇಕು. ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಲೋಕಾರ್ಪಣೆಗೆ ಇಡೀ ವಿಶ್ವವೇ ಕಾಯುತ್ತಿದೆ. ಆದ್ರೆ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರವು ಯಾರನ್ನೋ ಮೆಚ್ಚಿಸಲು ಈ ರೀತಿಯ ಷಡ್ಯಂತ್ರ, ಬೆದರಿಕೆ ಹಾಕುವ ತಂತ್ರ ನಡೆಸಲಾಗುತ್ತಿದೆ. ಇದಕ್ಕೆ ನಾವು ಅಂಜುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸ್ತೇವೆ. ಸಿದ್ದರಾಮಯ್ಯ ದೇಶದ ಪ್ರಧಾನಿಗಳಲ್ಲ. ಸಚಿವ ದಿನೇಶ್ ಗುಂಡೂರಾವ್ ಮಠ ಮಂದಿರಗಳ ಮೇಲೆ ಹಿಂದೂ ಭಗವಾಧ್ವಜ ಹಾರಿಸಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಹಿಂದೂ ಜಾಗ ವಿವಾದ ಎನ್ನುತ್ತಾರೆ. ಹೀಗೆಲ್ಲಾ ಯಾಕೆ ಮಾತನಾಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ. ಮನೆ ಮನೆಗೆ ಹೋಗಿ ಈಗಾಗಲೇ ಮಂತ್ರಾಕ್ಷತೆ ನೀಡಲಾಗುತ್ತಿದೆ. ಜನವರಿ 22 ರಂದು ಭವ್ಯವಾದ ರಾಮಮಂದಿರ ಉದ್ಘಾಟನೆ ಆಗುತ್ತಿದೆ. ಎಲ್ಲರೂ ಸಂಭ್ರಮದಿಂದ ಹಬ್ಬದಂತೆ ಆಚರಿಸೋಣ ಎಂದು ರೇಣುಕಾಚಾರ್ಯ ಹೇಳಿದರು.
ಶ್ರೀಕಾಂತ್ ಪೂಜಾರಿ ಮೇಲಿದ್ದ ಹದಿನಾರು ಮೊಕದ್ದಮೆಗಳು ಖುಲಾಸೆಯಾಗಿವೆ. ಆತ ಹಿಂದೂ ಕರಸೇವಕ. ದೇಶದ್ರೋಹಿಗಳಂತೆ ಕರೆದುಕೊಂಡು ಹೋಗಿ ಬಂಧಿಸಿ ನನ್ನನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಶ್ರೀಕಾಂತ್ ಹೇಳಿದ್ದಾರೆ. ಡಿ. ಜೆ. ಹಳ್ಳಿ, ಕೆ. ಜಿ. ಹಳ್ಳಿಯಲ್ಲಿ ಪೊಲೀಸ್ ಠಾಣೆ ಧ್ವಂಸ ಮಾಡಿದವರು, ಕಲ್ಲು ತೂರಿದವರು, ಭಯೋತ್ಪಾದಕರ ಮೊಕದ್ದಮೆ ವಾಪಸ್ ಪಡೆಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ತಾಕತ್ತಿದ್ದರೆ ಹಿಂದೂಗಳನ್ನು ಮುಟ್ಟಿ ನೋಡಿ. ಹಿಂದೂ ರಾಷ್ಟ್ರವಾದರೆ ಭಾರತ ದೇಶವು ಅಪ್ಘಾನಿಸ್ತಾನ, ಪಾಕಿಸ್ತಾನ ಆಗುತ್ತದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳುತ್ತಾರೆ. ಅಲ್ಪಸಂಖ್ಯಾತರಷ್ಟೇ ಮತ ಹಾಕಿಲ್ಲ, ಹಿಂದೂಗಳು ವೋಟ್ ಮಾಡಿದ್ದಾರೆ. ಸಿದ್ದರಾಮಯ್ಯ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು
ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕ ಬಿ. ಪಿ. ಹರೀಶ್, ಮಹಾನಗರ ಪಾಲಿಕೆ ಮಾಜಿ ಮೇಯರ್ ಅಜಯ್ ಕುಮಾರ್, ಪಿ. ಸಿ. ಶ್ರೀನಿವಾಸ್ ಭಟ್, ಲೋಕಿಕೆರೆ ನಾಗರಾಜ್, ಟಿಂಕರ್ ಮಂಜಣ್ಣ, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.