SUDDIKSHANA KANNADA NEWS/ DAVANAGERE/ DATE:10-03-2025
ದಾವಣಗೆರೆ: ಭಾನುವಳ್ಳಿಯ ಹಳೆಯ ವಿದ್ಯಾರ್ಥಿಗಳು ಒಟ್ಟುಗೂಡಿ ರಚಿಸಿಕೊಂಡಿರುವ ಸ್ನೇಹ ಸಂಭ್ರಮ ಗೆಳೆಯರ ಬಳಗದ ವತಿಯಿಂದ ಭಾನುವಳ್ಳಿಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿ ಸುಮಾರು 417 ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗವನ್ನು ನೀಡಲಾಗಿತ್ತು. ಇದರ ಬೆನ್ನಲ್ಲೇ ಸ್ನೇಹ ಸಂಭ್ರಮ ಗೆಳೆಯರ ಬಳಗ ಮತ್ತೊಂದು ಮಹತ್ವದ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದೆ. ಇದೇ ಏಪ್ರಿಲ್ 12ನೇ ಶನಿವಾರದಂದು ಭಾನುವಳ್ಳಿಯಲ್ಲಿ ಬೃಹತ್ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ.
ಪ್ರತಿಷ್ಠಿತ ಹಾಸ್ಪಿಟಲ್ ಗಳನ್ನು ಆಮಂತ್ರಿಸಿದ್ದು, ಹೆಸರಾಂತ ವೈದ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸ್ನೇಹ ಸಂಭ್ರಮ ಗೆಳೆಯರ ಬಳಗದ ಗೌರವಾಧ್ಯಕ್ಷ ತೇಜಸ್ವಿ ಕಟ್ಟಿಮನಿ ಟಿ. ಆರ್. ತಿಳಿಸಿದ್ದಾರೆ.
ಈ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳಿಗೆ ಭೀಮಸಮುದ್ರದ ಜಿ. ಮಲ್ಲಿಕಾರ್ಜುನಪ್ಪ ಮತ್ತು ಹಾಲಮ್ಮ ಚಾರಿಟಿ ಫೌಂಡೇಶನ್ ಬೆನ್ನೆಲುಬಾಗಿ ನಿಂತಿರುವುದು ನಮ್ಮೆಲ್ಲರಿಗೂ ಸಂತಸವನ್ನು ತಂದಿದೆ ಎಂದು ತಿಳಿಸಿದ್ದಾರೆ.
ಆರೋಗ್ಯ ಮೇಳದ ಜೊತೆಗೆ ರಕ್ತದಾನ ಶಿಬಿರವು ನಡೆಯಲಿದ್ದು, ಅನೇಕ ಯುವಕರುಗಳು ಪಾಲ್ಗೊಂಡು ರಕ್ತದಾನವನ್ನು ಮಾಡಲಿದ್ದಾರೆ. ಸಾಮಾನ್ಯ ಕಾಯಿಲೆಗಳಿಗೆ ಉಚಿತ ಔಷಧಿ ವಿತರಣೆಯನ್ನು ನೀಡಲಾಗುತ್ತಿದ್ದು, ಭಾನುವಳ್ಳಿಯ ಜನತೆ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದ್ದಾರೆ.
ಭಾನುವಳ್ಳಿ ಗ್ರಾಮದ ಸಮಸ್ತ ಮುಖಂಡರು, ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರುಗಳು ಬೆಂಬಲವನ್ನು ಸೂಚಿಸಿದ್ದು, ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಲಿದ್ದಾರೆ ಎಂದು ಸ್ನೇಹ ಸಂಭ್ರಮ ಗೆಳೆಯರ ಬಳಗದ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ಅನೇಕ ಸಂಘಟನೆಗಳು ತಮ್ಮ ಬೆಂಬಲವನ್ನು ಸೂಚಿಸಿದ್ದು, ಭಾನುವಳ್ಳಿ ನೌಕರರ ಬಳಗವು ಬೆಂಬಲ ನೀಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಲಿದ್ದೇವೆ ಎಂದು ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.
ಭಾನವಳ್ಳಿಯ ಸಮಸ್ತ ನಾಗರಿಕ ಬಂಧುಗಳು ಸ್ನೇಹ ಸಂಭ್ರಮ ಗೆಳೆಯರ ಬಳಗದ ಎಲ್ಲಾ ಕಾರ್ಯಕ್ರಮಗಳಿಗೂ ಬೆಂಬಲಿಸುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸ್ನೇಹ ಸಂಭ್ರಮ ಗೆಳೆಯರ ಬಳಗದ ಉಪಾಧ್ಯಕ್ಷ ವಿಶ್ವನಾಥಯ್ಯ, ಪ್ರಧಾನ ಕಾರ್ಯದರ್ಶಿ ರಾಮನಗೌಡ, ಸಂಘಟನಾ ಕಾರ್ಯದರ್ಶಿ ಫಕೀರಪ್ಪ ಮತ್ತು ವಿವಿಧ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.