SUDDIKSHANA KANNADA NEWS/ DAVANAGERE/ DATE:14-01-2024
ದಾವಣಗೆರೆ: ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ಜಿಲ್ಲಾದ್ಯಂತ ಏರ್ಪಡಿಸುತ್ತಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರಗಳ ಬಗ್ಗೆ ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ಸೂಚಿಸಿ, ಅಭಿನಂದನಾ ಪತ್ರವನ್ನು ಕಳುಹಿಸಿದ್ದಾರೆ.
ಜನವರಿ 3ರಂದು ಬೆಂಗಳೂರಿನ ರಾಜಭವನಕ್ಕೆ ಆಹ್ವಾನಿಸಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ ಅವರೊಂದಿಗೆ ಶಿಬಿರಗಳ ಆಯೋಜನೆ ಕುರಿತಾಗಿ ರಾಜ್ಯಪಾಲರು ಚರ್ಚೆ ನಡೆಸಿದ್ದರು. ಈ ವೇಳೆ, ಜಗಳೂರಿನ ಮಾಜಿ ಶಾಸಕರಾದ ಟಿ.ಗುರುಸಿದ್ಧನಗೌಡರು ಸಹ ಜತೆಗಿದ್ದು, ಪ್ರೀತಿ ಆರೈಕೆ ಟ್ರಸ್ಟ್ ಆಯೋಜಿಸುತ್ತಿರುವ ಆರೋಗ್ಯ ಸೇವೆಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದ್ದರು.
ರಾಜ್ಯಪಾಲರಿಂದ ಪ್ರಶಂಸನಾ ಪತ್ರ ಬಂದಿರುವ ಬಗ್ಗೆ ಡಾ. ರವಿಕುಮಾರ್ ಟಿ.ಜಿ. ಅವರು ಪ್ರತಿಕ್ರಿಯಿಸಿ, ಮೂರು ವರ್ಷಗಳ ಹಿಂದೆ ಇದೇ ದಿನ ಶ್ರೀಮತಿ ಪ್ರೀತಿ ಅವರು ನಮ್ಮನ್ನು ಅಕಾಲಿಕವಾಗಿ ಅಗಲಿದರು. ಆ ದುಖಃವನ್ನು ಭರಸಿಕೊಂಡು, ಪ್ರೀತಿ ಅವರ ಸಾಮಾಜಿಕ ಸೇವಾಕಾರ್ಯಸ ತುಡಿತವನ್ನು ಈಡೇರಿಸಲು ಪ್ರೀತಿ ಆರೈಕೆ ಟ್ರಸ್ಟ್ ಆರಂಭಿಸಿದೆವು. ಈವರೆಗೂ ಜಿಲ್ಲಾದ್ಯಂತ 48 ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಸರಿ ಸುಮಾರು 23 ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ದಾಸೋಹ ನೀಡಿದ್ದೇವೆ. ಇದನ್ನು ಗುರುತಿಸಿ ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಪ್ರಶಂಸನಾ ಪತ್ರ ನೀಡಿರುವುದು ಸಂತಸದ ಸಂಗತಿ. ಈ ಅಭಿನಂದನೆಯನ್ನು ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಆಸ್ಪತ್ರೆಯ ನನ್ನ ಕುಟುಂಬ ಮತ್ತು ದಾವಣಗೆರೆ ಜಿಲ್ಲೆಯ ಸಮಸ್ತ ಜನತೆಗೆ ಅರ್ಪಿಸುತ್ತೇನೆ ಎಂದು ರವಿಕುಮಾರ್ ಹೇಳಿದ್ದಾರೆ.
ಟ್ರಸ್ಟ್ ಪ್ರಾರಂಭದ ದಿನವೇ 30 ನಿವೃತ್ತ ಸೈನಿಕರಿಗೆ ಅಜೀವ ಪರ್ಯಂತ ಉಚಿತ ಚಿಕಿತ್ಸೆ ನೀಡಲಾರಂಭಿಸಿದೆವು. ಇದರ ಜತೆಗೆ, ಉಚಿತವಾಗಿ ಆರೋಗ್ಯ ಚಿಕಿತ್ಸೆ ನೀಡುವ ಜತೆಗೆ ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಕಾಳಜಿ,
ತಿಳುವಳಿಕೆ, ಮಾರ್ಗದರ್ಶನ, ಸಲಹೆ ನೀಡುವ ಉದ್ದೇಶದಿಂದ ಉಚಿತ ಶಿಬಿರ ಆರಂಭಿಸಿದೆವು. ಸರಿಯಾದ ಮಾಹಿತಿ ಇಲ್ಲದೆಯೇ ಹಠಾತ್ ಅನಾಹುತ ಆಗುವ ಬಗ್ಗೆ ಅರಿವು ಮೂಡಿಸುತ್ತ ನಮ್ಮ ಆರೋಗ್ಯ ದಾಸೋಹ
ಕಾರ್ಯವನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದರು.