SUDDIKSHANA KANNADA NEWS/ DAVANAGERE/ DATE:12-01-2024
ದಾವಣಗೆರೆ: ರಾಜ್ಯ ಸರ್ಕಾರದ ನಿರ್ದೇಶನದಂತೆ ಕನ್ನಡ ನಾಮಫಲಕ ಅಳವಡಿಸದಿದ್ದರೆ ಟ್ರೇಡಿಂಗ್ ಲೈಸೆನ್ಸ್ ರದ್ದು ಪಡಿಸಿ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಎಚ್ಚರಿಕೆ
ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ನಾಮಫಲಕ ಎಲ್ಲಾ ಅಂಗಡಿಗಳಲ್ಲಿ ಕಡ್ಡಾಯವಾಗಿ ಇರಲೇಬೇಕು. ರಾಜ್ಯ ಸರ್ಕಾರದ ಸೂಚನೆಯಂತೆ ಶೇಕಡಾ 60ರಷ್ಟು ನಾಮಫಲಕ ಕನ್ನಡದಲ್ಲಿಯೇ ಕಡ್ಡಾಯವಾಗಿ ಇರಬೇಕು. ಈಗಾಗಲೇ ಉಲ್ಲಂಘನೆ ಮಾಡಿದ ಅಂಗಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಈ ತಿಂಗಳೊಳಗೆ ಸರಿಪಡಿಸಬೇಕು. ಕೆಲ ದೊಡ್ಡ ದೊಡ್ಡ ಶೋರೂಂ, ಹೊಟೇಲ್ ಸೇರಿದಂತೆ ಹಲವೆಡೆ ಎಚ್ಚರಿಕೆ ನೀಡುವ ಕೆಲಸ ಮಾಡಲಾಗಿದೆ. ಇದನ್ನು ಉಲ್ಲಂಘಿಸಿದ್ದೇ ಆದಲ್ಲಿ ಮುಲಾಜಿಲ್ಲದೇ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ. ಆಡಳಿತ ಭಾಷೆಯೂ ಕನ್ನಡ. ಪ್ರತಿಯೊಂದು ಅಂಗಡಿ, ಶೋರೂಂ ಸೇರಿದಂತೆ ಎಲ್ಲಾ ಅಂಗಡಿಗಳಲ್ಲಿಯೂ ಶೇಕಡಾ 60 ರಷ್ಟು ಕನ್ನಡ ಬಳಕೆ ಕಡ್ಡಾಯ. ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ ಈಗಾಗಲೇ ಉಲ್ಲಂಘನೆ ಮಾಡಿದ ಅಂಗಡಿಗಳಿಗೆ ಭೇಟಿ ನೀಡಿ ತೆಗೆಸುವ ಕೆಲಸ ಮಾಡಿದ್ದಾರೆ. ಕೆಲವೆಡೆ ಸುಣ್ಣ ಬಳಿಯಲಾಗಿದೆ. ಮುಂದುವರಿಸಿದ್ದೇ ಆದಲ್ಲಿ ದಂಡ ಹಾಕುವುದು ಅನಿವಾರ್ಯ ಆಗಲಿದೆ. ಇದಕ್ಕೆ ಜನರು ಆಸ್ಪದ ನೀಡದಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ವಿಭಾಗದಲ್ಲಿ ದಾವಣಗೆರೆಯು ರಾಜ್ಯದಲ್ಲಿ ಆರನೇ ಸ್ಥಾನ ಪಡೆದಿದೆ. ಆರನೇ ರ್ಯಾಂಕ್ ಪಡೆಯುವ ಮೂಲಕ ಸ್ವಚ್ಛ ನಗರಿ ಎಂಬ ಕೀರ್ತಿಗೂ ಪಾತ್ರವಾಗಿದೆ. ದೇಶದಲ್ಲಿಯೇ 169ನೇ ಸ್ಥಾನ ಪಡೆದಿದೆ. ಮಾತ್ರವಲ್ಲ, ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಈ ಮೂಲಕ ದಾವಣಗೆರೆ ಮುಕುಟಕ್ಕೆ ಮತ್ತೊಂದು ಗರಿ ಬಂದಂತಾಗಿದೆ. ಒಂದು ಲಕ್ಷ ಮೇಲ್ಪಟ್ಟು ಜನಸಂಖ್ಯೆ ಹೊಂದಿರುವ ಕಡೆಗಳಲ್ಲಿ ಸರ್ವೇ ನಡೆಸಲಾಗುತ್ತಿದೆ. ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತ ಹಲವು ಜಿಲ್ಲೆಗಳ ಪೈಕಿ ದಾವಣಗೆರೆ ಆರನೇ ಸ್ಥಾನಕ್ಕೆ ಬಂದಿದ್ದು, ಕಳೆದ ವರ್ಷ 12 ನೇ ಸ್ಥಾನದಲ್ಲಿತ್ತು. ಸ್ವಚ್ಚ ನಗರಿ ಎಂಬ ಕೀರ್ತಿಗೆ ಪಾತ್ರವಾಗಲು ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರು, ಪೌರಕಾರ್ಮಿಕರು, ದಾವಣಗೆರೆ ನಗರದ ಜನರ ಸಹಕಾರದಿಂದ ಇದು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಒಂದನೇ ಸ್ಥಾನಕ್ಕೆ ತರಲು ಪ್ರಯತ್ನ ಪಡೋಣ ಎಂದು ಹೇಳಿದರು.
ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಎಚ್ಚರಿಸುವ ಕೆಲಸ ಮಾಡಲಾಗಿದೆ. 500 ರೂಪಾಯಿಯಿಂದ 10 ಸಾವಿರ ರೂಪಾಯಿಯವರೆಗೆ ದಂಡ ವಿಧಿಸಲಾಗಿದ್ದು, ಇದುವರೆಗೆ 908 ಜನರಿಗೆ ದಂಡ ಹಾಕಲಾಗಿದೆ. ಮೂರುವರೆ ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ನಿರೀಕ್ಷಕರು ಸ್ಪಾಟ್ ಫೈನ್ ಹಾಕುತ್ತಿದ್ದಾರೆ. ಕಸ ಎಲ್ಲೆಂದರಲ್ಲಿ ಬಿಸಾಡಿದರೆ ಇನ್ಮುಂದೆ ಸಹಿಸಲು ಆಗದು. ಮನೆ ಸುತ್ತಮುತ್ತ, ಎಲ್ಲೆಂದರಲ್ಲಿ ಹಾಗೂ ರಸ್ತೆಯಲ್ಲಿ ಕಸ ಬಿಸಾಡುವವರ ವಿರುದ್ಧ ಕ್ರಮ ಖಚಿತ. ಖಾಲಿ ಸೈಟ್ ಗಳಲ್ಲಿ ಕಸ ಬಿಸಾಡಲಾಗಿದ್ದು, ಮುಂದಿನ ವರ್ಷದಿಂದ ಸ್ವಚ್ಛಗೊಳಿಸದಿದ್ರೆ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎ. ನಾಗರಾಜ್, ಅಬ್ದುಲ್ ಲತೀಫ್ ಹಾಜರಿದ್ದರು.