SUDDIKSHANA KANNADA NEWS/ DAVANAGERE/ DATE:06-12-2023
ದಾವಣಗೆರೆ: ಲೋಕಿಕೆರೆ ಅಂಡರ್ ಬ್ರಿಡ್ಜ್ ಬಳಿ ಅಡ್ಡ ಹಾಕಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಿರುವ ವಿದ್ಯಾನಗರ ಪೊಲೀಸರು, 2,90,000 ರೂಪಾಯಿ ಮೌಲ್ಯದ ನಾಲ್ಕು ಬೈಕ್ ಗಳು ಹಾಗೂ ಒಂದು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆಯ ಅಶ್ವಥ್ ಪಿ. ಅಲಿಯಾಸ್ ಚಿನ್ನು (20), ಪ್ರಜ್ವಲ್ ಕೆ.ಎಸ್. (20), ಸುಪ್ರೀತ್ (19), ಆಕಾಶ್. ಎನ್. (18), ಅರವಿಂದ ಎಸ್. (19), ಕಾನೂನು ಸಂಘರ್ಷಕ್ಕೊಳಗಾದ ಬಾಲಕ ನನ್ನು ಬಂಧಿಸಲಾಗಿದೆ.

ಘಟನೆ ಹಿನ್ನೆಲೆ ಏನು…?
ಭಗತ್ ಸಿಂಗ್ ನಗರದ ಲಾರಿ ಡ್ರೈವರ್ ಚೇತನ್ ಎಂಬುವವರು ನವೆಂಬರ್ 20ರಂದು ರಾತ್ರಿ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಠಾಂಡ್ ಬಳಿ ತನ್ನ ಸ್ನೇಹಿತ ಗಣೇಶ ಎಂಬಾತನ ಜೊತೆ ಊಟ ಮಾಡಿಕೊಂಡು ರಾತ್ರಿ ಸುಮಾರು 1 ಗಂಟೆ 24 ನಿಮಿಷದ ಸಮಯದಲ್ಲಿ ಸುಬ್ರಹ್ಮಣ್ಯನಗರದ ವಿನಾಯಕ ರೈಸ್ ಮಿಲ್ ಕಡೆಗೆ ತಮ್ಮ ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಲೋಕಿಕೆರೆ ಅಂಡರ್ ಬ್ರಿಡ್ಜ್ ಬಳಿ ಎರಡು ಬೈಕ್ಗಳಲ್ಲಿ ಯಾರೋ 5 ಜನರು ಎರಡು ಬೈಕ್ಗಳಲ್ಲಿ ಬಂದು ತಮ್ಮ ಬೈಕ್ ಅನ್ನು ಅಡ್ಡ ಹಾಕಿ ಕೈಯಿಂದ ಮುಖಕ್ಕೆ ಹೊಡೆದು ಇನ್ನೊಬ್ಬ ಬ್ಲೇಡ್ ಹಿಡಿದುಕೊಂಡು ಬೆದರಿಕೆ ಹಾಕಿದ್ದಾರೆ.
ಬೈಕ್ನಲ್ಲಿದ್ದವರು ಏಕಾಏಕಿ ಬಂದು ಚೇತನ್ ಮತ್ತು ಆತನ ಸ್ನೇಹಿತ ಗಣೇಶನಿಗೆ ಎಲ್ಲರೂ ಸೇರಿಕೊಂಡು ಹೊಡೆದು ಚೇತನ್ ಬಳಿ ಇದ್ದ ರೆಡ್ಮಿ ಮೊಬೈಲ್, ತನ್ನ ಸ್ನೇಹಿತನ ಬಳಿ ಇದ್ದ 10000 ರೂ. ಮತ್ತು ಬೈಕ್ನ ಕೀ ಕಿತ್ತುಕೊಂಡು ಹೆದರಿಸಿ ಓಡಿಹೋಗಿದ್ದರು. ಈ ಸಂಬಂಧ ತಮ್ಮ ಮೇಲೆ ಹಲ್ಲೆ ಮಾಡಿ ಮೊಬೈಲ್ ಮತ್ತು ನಗದು ಕಿತ್ತುಕೊಂಡು ಹೋದವರನ್ನು ಬಂಧಿಸಬೇಕು ಎಂದು ವಿದ್ಯಾನಗರ ಪೊಲೀಸರಿಗೆ ಚೇತನ್ ದೂರು ನೀಡಿದ್ದರು.
ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ಅವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿ ಹಾಗೂ ಡಿ.ಸಿ.ಐ.ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಆರೋಪಿತರು ಹಾಗೂ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನಿಂದ ಕಳ್ಳತನ ಮಾಡಿದ್ದ ರೂ 10,000 ಬೆಲೆ ಬಾಳುವ 1 ರೆಡ್ಮಿ ಮೊಬೈಲ್ ಫೋನ್, ಕೃತ್ಯಕ್ಕೆ ಉಪಯೋಗಿಸಿದ್ದ 2,90,000 ರೂ ಬೆಲೆ ಬಾಳುವ 4 ಬೈಕ್ಗಳು ಮತ್ತು ರೂ 54000 ಮೌಲ್ಯದ 9 ಗ್ರಾಂನ ಬಂಗಾರದ ಸರವನ್ನು ಈ ತಂಡವು ವಶಪಡಿಸಿಕೊಂಡಿದೆ.
ವಿದ್ಯಾನಗರ ಪೊಲೀಸ್ ಠಾಣೆಯ ಒಟ್ಚು 2, ಕೆ.ಟಿ.ಜೆ ನಗರ ಪೊಲೀಸ್ ಠಾಣೆಯ 1 ಸೇರಿದಂತೆ ಒಟ್ಟು 3 ಪ್ರಕರಣಗಳು ಪತ್ತೆಯಾಗಿವೆ. ಆರೋಪಿತರನ್ನು ಪತ್ತೆ ಮಾಡಿದ ವಿದ್ಯಾನಗರ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ,
ಡಿಸಿಐಬಿ ಘಟಕದ ಪೊಲೀಸ್ ಇನ್ ಸ್ಪೆಕ್ಟರ್ ರುದ್ರಪ್ಪ. ಎಲ್., ವಿದ್ಯಾನಗರ ಪೊಲೀಸ್ ಠಾಣೆಯ ಪಿಎಸ್ಐ ಎಂ. ವಿಜಯ್ ಹಾಗೂ ಸಿಬ್ಬಂದಿಯಾದ ಆನಂದ ಮುಂದಲಮನಿ, ಯೋಗೀಶ್ ನಾಯ್ಕ, ಭೋಜಪ್ಪ ಕಿಚಡಿ, ಮಂಜಪ್ಪ.ಟಿ, ಲಕ್ಷ್ಮಣ್, ಡಿಸಿಐಬಿ ಘಟಕದ ಮಜೀದ್, ಅಶೋಕ್, ರಾಘವೇಂದ್ರ, ಬಾಲಾಜಿ, ಸುರೇಶ, ರಮೇಶ್ನಾಯ್ಕ್, ನಟರಾಜ, ಮಾರುತಿ, ಆಂಜನೇಯ ರಾಘವೇಂದ್ರ, ಶಾಂತರಾಜು ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.