SUDDIKSHANA KANNADA NEWS/ DAVANAGERE/ DATE:09-11-2023
ದಾವಣಗೆರೆ: ಆಧಾರ್ ತಿದ್ದುಪಡಿ, ನವೀಕರಣ ಅರ್ಜಿ ನಮೂನೆಯ ಪತ್ರಾಂಕಿತ ಅಧಿಕಾರಿಯಂತೆ ಸೀಲು ಮತ್ತು ಸಹಿ ನಕಲು ಮಾಡಿಕೊಡುತ್ತಿದ್ದ ಆರೋಪಿಯನ್ನು ಬಸವನಗರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ತಾಲೂಕಿನ ಪುಟಗನಾಳ್ ಗ್ರಾಮದ ಪತ್ರ ಬರಹಗಾರ ಬಸವರಾಜಪ್ಪ ಅಲಿಯಾಸ್ ಬಸವಂತಪ್ಪ (70) ಬಂಧಿತ ಆರೋಪಿ.

ಕಳೆದ 7 ನೇ ತಾರೀಖಿನಂದು ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಸದ್ಯೋಜಾತಪ್ಪ ಅವರು ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ 12 ಗಂಟೆಗೆ ಅಂಚೆ ಕಚೇರಿ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ವಿಳಾಸ ಮತ್ತು ವಯಸ್ಸು
ತಿದ್ದುಪಡಿ ಮಾಡಿಕೊಡಲು ಗ್ರಾಹಕರು ಸಲ್ಲಿಸಿದ ನಿಗದಿತ ಅರ್ಜಿ ನಮೂನೆಯಲ್ಲಿ ಪತ್ರಾಂಕಿತ ಅಧಿಕಾರಿಯು ದೃಢೀಕರಣ ಸಹಿ ಮಾಡಬೇಕಾಗಿತ್ತು. ಪತ್ರಾಂಕಿತ ಅಧಿಕಾರಿಯ ಸಹಿ ಮತ್ತು ಸೀಲು ಹಾಕುವ ಸ್ಥಳದಲ್ಲಿ ನಾನೇ ಪತ್ರಾಂಕಿತ ಅಧಿಕಾರಿ ಎಂದು “ಹಿರಿಯ ತಜ್ಞರು. ಸಿ.ಜಿ.ಹೆಚ್. ದಾವಣಗೆರೆ” ಅಂತಾ ನಕಲು ಸೀಲನ್ನು ಸೃಷ್ಟಿ ಮಾಡಿಕೊಂಡು ಪತ್ರಾಂಕಿತ ಅಧಿಕಾರಿ ಎಂದು ಹಸಿರು ಶಾಯಿಯಿಂದ ನಕಲು ಸಹಿ ಮಾಡಿರುವುದು ಕಂಡು ಬಂದಿದೆ.
ನಕಲು ಸಹಿ ಮಾಡಿದ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತಾ ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾದ ಬಸವರಾಜಪ್ಪ ಅಲಿಯಾಸ್ ಬಸವಂತಪ್ಪರನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಉಪಯೋಗಿಸಿದ ನಕಲಿ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಪತ್ತೆ ಮಾಡಲು ಎಎಸ್ಪಿ ವಿಜಯಕುಮಾರ.ಎಂ ಸಂತೋಷ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್. ಗುರುಬಸವರಾಜ ಅವರ ನೇತೃತ್ವದಲ್ಲಿ ಪಿಎಸ್ ಐ ಜಿ. ನಾಗರಾಜ , ಸಿಬ್ಬಂದಿ ಎಎಸ್ ಐ ಜಿ. ಆರ್. ಶಿವಪ್ಪ, ಮಹಮದ್ ರಫಿ, ಗಿರೀಶ್ ಬಿ.ಪಿ., ಕವಿತಾ, ಅಣ್ಣಯ್ಯ ಲಮಾಣಿ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಆರೋಪಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿತನು ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಆಧಾರ್ ತಿದ್ದುಪಡಿ ಅರ್ಜಿ ನಮೂನೆಯಲ್ಲಿನ ಪತ್ರಾಂಕಿತ ಅಧಿಕಾರಿಯ ದೃಢೀಕರಣ ಮಾಡುವ ಪತ್ರಾಂಕಿತ ಅಧಿಕಾರಿಯ ಸಹಿ ಮತ್ತು ಸೀಲು ಹಾಕುವ ಸ್ಥಳದಲ್ಲಿ ನಾನು ಸೃಷ್ಟಿಸಿಕೊಂಡ “ಹಿರಿಯ ತಜ್ಞರು. ಸಿ.ಜಿ.ಹೆಚ್. ದಾವಣಗೆರೆ” ಅಂತಾ ನಕಲು ಸೀಲನ್ನು ಹಾಕಿ ನಾನೇ ಪತ್ರಾಂಕಿತ ಅಧಿಕಾರಿ ಎಂದು ಹಸಿರು ಶಾಯಿಯಿಂದ ನಕಲು ಸಹಿ ಮಾಡಿರುತ್ತೇನೆ ಎಂದು ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.