SUDDIKSHANA KANNADA NEWS\ DAVANAGERE\ DATE:30-10-2023
ದಾವಣಗೆರೆ: ಹರಿಹರ ತಾಲೂಕಿನ ಸಾಲಕಟ್ಟೆ ಗ್ರಾಂ.ಪಂ ಸದಸ್ಯೆ ಪತಿ ಮತ್ತು ಪಿಡಿಓ ಅವರು ಸಿಬ್ಬಂದಿ ಮೇಲೆ ಮಾಡಿರುವ ಹಲ್ಲೆ ದೂರು, ಪ್ರತಿ ದೂರಿಗೆ ಸಂಬಂಧಿಸಿದಂತೆ ತಾ.ಪಂ. ಇಓ ತನಿಖೆ ನಡೆಸಿ ವರದಿ ನೀಡಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ನಿರ್ದೇಶನ ನೀಡಿದ್ದಾರೆ.
ಇಂದು ಬೆಳಿಗ್ಗೆ ಪ್ರತಿಮಾ ಅವರು ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿಇಒ ಸೂಚನೆ ಕೊಟ್ಟಿದ್ದಾರೆ.

ಡಾಟಾ ಎಂಟ್ರಿ ಆಪರೇಟರ್ ಆರೋಪವೇನು…?
ಭ್ರಷ್ಟಾಚಾರ, ನಕಲಿ ಬಿಲ್ ಸೇರಿದಂತೆ ಅಕ್ರಮಗಳಿಗೆ ಸಹಕಾರ ಕೊಡದ ಕಾರಣ ನನ್ನ ಗ್ರಾಮ ಪಂಚಾಯತಿ ಸದಸ್ಯೆ ಪತಿ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಪಿಡಿಒ ಸಹ ನನ್ನನ್ನು ಥಳಿಸಿದ್ದಾರೆ ಎಂದು ಸಾಲಕಟ್ಟೆ ಗ್ರಾಮ ಪಂಚಾಯಿತಿಯ ಡಿಇಒ ಪ್ರತಿಮಾ ನೋವು ತೋಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲಕಟ್ಟೆ ಗ್ರಾಮ ಪಂಚಾಯತಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಜಿಲ್ಲಾ ಪಂಚಾಯಿತಿ ಕಚೇರಿಯಿಂದ ನನ್ನನ್ನು ಅಲ್ಲಿಗೆ ವರ್ಗಾವಣೆ ಮಾಡಲಾಗಿತ್ತು. ನಾನು ಹೋದ ದಿನದಿಂದಲೂ ಒಂದಲ್ಲಾ ಒಂದು ರೀತಿ ತೊಂದರೆ ಕೊಡುತ್ತಿದ್ದರೆ. ಆದ್ರೆ ಗ್ರಾ.ಪಂ. ಸದಸ್ಯೆ ಅನುಪಮಾ ಪತಿ ಸಿದ್ದಪ್ಪ ಅಧಿಕಾರಿಗಳು ಇಲ್ಲದ ಸಮಯದಲ್ಲಿ ಕಚೇರಿಗೆ ಬಂದು ದಾಖಲಾತಿ ಕೇಳಿದ್ದರು. ಅಧಿಕಾರಿಗಳ ಅನುಮತಿ ಇಲ್ಲದೇ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗಿನಿಂದಲೂ ನನ್ನ ಮೇಲೆ ಒಂದಲ್ಲಾ ಒಂದು ಕಾರಣಕ್ಕೆ ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿದರು.
ಸಿದ್ದಪ್ಪ ಅವರಿಗೆ ಈಗಿನ ಪಿಡಿಓ ಸಹ ಸಾಥ್ ನೀಡಿದ್ದಾರೆ. ಕಳೆದ ಅ.27 ರಂದು ಬೆಳಗ್ಗೆ 10.30ಕ್ಕೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪಿಡಿಓ ದಾಸರ ರವಿ ಅವರು ಏಕವಚನ ಬಳಸಿ ಮಾತನಾಡಿ ಹಲ್ಲೆ ಮಾಡಿದ್ದಾರೆ ಹಾಗೂ ಸಿದ್ದಪ್ಪ ಸೇರಿದಂತೆ ಆತನ ಜೊತೆಗಿದ್ದವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೂ ದೂರು ಕೊಡುತ್ತೇನೆ. ನನಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದರು.
ಸಿದ್ದಪ್ಪರ ಪತ್ನಿ ಅನುಪಮಾ ಗ್ರಾಮ ಪಂಚಾಯಿತಿ ಸದಸ್ಯೆ. ಆದ್ರೆ, ಸಿದ್ದಪ್ಪ ಬಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಪೊಲೀಸರಿಗೆ ದೂರು ಕೊಟ್ಟಿದ್ದು, ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಈ ಪ್ರಕರಣ ಸಂಬಂಧ ತನಿಖೆ ನಡೆಸಿ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಜೆ.ಅರುಣ್ ಕುಮಾರ್, ರೇವಣಸಿದ್ದಪ್ಪ, ಎಸ್.ಅರುಣ್ ಕುಮಾರ್ ಹಾಜರಿದ್ದರು.