
ಬೆಂಗಳೂರು: ರಜಾ ಕಾಲದ ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಇಲಾಖೆಯು ರೈಲು ಟಿಕೆಟ್ ಗ್ರೂಪ್ ಬುಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ.
ನೈರುತ್ಯ ರೈಲ್ವೆಯು ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ದೊಡ್ಡ ಸಂಖ್ಯೆಯಲ್ಲಿ ಕುಟುಂಬಗಳು, ವಿದ್ಯಾರ್ಥಿಗಳು ಅಥವಾ ಸಹೋದ್ಯೋಗಿಗಳೊಂದಿಗೆ ಒಟ್ಟಾಗಿ ರೈಲು ಪ್ರಯಾಣ ಮಾಡಲಿರುವವರಿಗೆ ಇದು ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಪ್ರಮುಖವಾಗಿ ಬಲ್ಕ್ ಮತ್ತು ಗ್ರೂಪ್ ಬುಕಿಂಗ್ಗಳಲ್ಲಿ ಅನುಮೋದಿಸಬಹುದಾದ ಬರ್ತ್ಗಳ ಸಂಖ್ಯೆಯ ಮೇಲಿದ್ದ ನಿಗದಿತ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ವಾಣಿಜ್ಯ ವೃತ್ತCircular (Coaching) No. 37/2026 ಹಾಗೂ Rate Advice No. 11/2026 ರನ್ವಯ ಜಾರಿಗೆ ಬಂದಿರುವ ಈ ಹೊಸ ನಿಯಮಗಳ ಪ್ರಕಾರ, ಮದುವೆಗಳು, ಶೈಕ್ಷಣಿಕ ಪ್ರವಾಸಗಳು, ತೀರ್ಥಯಾತ್ರೆಗಳು, ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಟ್ಟಾಗಿ ಪ್ರಯಾಣಿಸುವವರಿಗೆ ಅಧಿಕೃತ ರೈಲ್ವೆ ಅಧಿಕಾರಿಗಳು ಹೆಚ್ಚಿನ ವಿನಾಯಿತಿ ಮತ್ತು ನಮ್ಯತೆಯನ್ನು ನೀಡಲಿದ್ದಾರೆ. ದುರುಪಯೋಗವಾಗದಂತೆ ತಡೆಯುವ ಜೊತೆಗೆ ನಿಜವಾದ ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ಸಿಗುವಂತೆ ಮಾಡುವ ಉದ್ದೇಶದಿಂದ ಈ ಪರಿಷ್ಕರಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಬರ್ತ್ ಮಿತಿ ರದ್ದು: ಬಲ್ಕ್ ಬುಕಿಂಗ್ಗಳಲ್ಲಿ ಇಂತಿಷ್ಟೇ ಸೀಟುಗಳು ಅಥವಾ ಬರ್ತ್ಗಳು ಎಂದು ನಿಗದಿಪಡಿಸಲಾಗಿದ್ದ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದ್ದು, ಮುಖ್ಯ ಕಾಯ್ದ réservation ಸೂಪರ್ವೈಸರ್ಗಳು (CRS) ಹಾಗೂ ನಿಲ್ದಾಣ ವ್ಯವಸ್ಥಾಪಕರಿಗೆ (SM) ಹೆಚ್ಚಿನ ಅಧಿಕಾರ ನೀಡಲಾಗಿದೆ. ಎಲ್ಲಾ ವರ್ಗದ ಪ್ರಯಾಣಕ್ಕೂ ಇದು ಅನ್ವಯಿಸುತ್ತದೆ.
ಬುಕಿಂಗ್ ಸಮಯ ಯಾವಾಗ?: ಮುಂಗಡ ಕಾಯ್ದಿರಿಸುವಿಕೆಯ (Advance Reservation Period – ARP) ಆರಂಭಿಕ ದಿನದಂದು ಸಾಮಾನ್ಯ ಪ್ರಯಾಣಿಕರಿಗೆ ಅವಕಾಶ ನೀಡಿದ ಒಂದು ಗಂಟೆಯ ಬಳಿಕ ಅಂದರೆ ಬೆಳಿಗ್ಗೆ 9:00 ಗಂಟೆಯಿಂದ ಪ್ರಮುಖ ಕಾಯ್ದಿರಿಸುವಿಕೆ ಕೇಂದ್ರಗಳಲ್ಲಿ ಗ್ರೂಪ್ ಬುಕಿಂಗ್ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.
ದಾಖಲೆಗಳು ಹಾಗೂ ವಿವರಗಳು ಕಡ್ಡಾಯ: ಗ್ರೂಪ್ ಬುಕಿಂಗ್ಗೆ ಅರ್ಜಿ ಸಲ್ಲಿಸುವವರು ಪ್ರಯಾಣದ ನಿಖರವಾದ ಉದ್ದೇಶವನ್ನು ನಮೂದಿಸಬೇಕು. ಜೊತೆಗೆ ಪ್ರತಿ ಪ್ರಯಾಣಿಕರ ಪೂರ್ಣ ಹೆಸರು, ವಯಸ್ಸು, ಲಿಂಗ, ವಿಳಾಸ ಹಾಗೂ ಪ್ರಯಾಣದ ಕಾರಣವನ್ನು ನೀಡುವುದು ಕಡ್ಡಾಯವಾಗಿದೆ. ವಿವರಗಳಿಲ್ಲದ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ವಿದೇಶಿ ಪ್ರವಾಸಿಗರಿಗೆ ವಿನಾಯಿತಿ: ಎನ್ಆರ್ಐ (NRI) ಹಾಗೂ ವಿದೇಶಿ ಪ್ರವಾಸಿಗರ ಬುಕಿಂಗ್ಗಳಿಗೆ ಎಂದಿನಂತೆ ಹಳೆಯ ನಿಯಮಗಳೇ ಮುಂದುವರಿಯಲಿವೆ.




