
ಕೋಟ್ಪುಟ್ಲಿ-ಬೆಹ್ರೋರ್: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹರಿಯಾನಾಗೆ ಕರೆಸಿ ಹತ್ಯೆಗೈದು, ಆ ಬಳಿಕ ವಿಮಾ ಪರಿಹಾರದ (Insurance Claim) ಹಣ ಪಡೆಯುವ ಉದ್ದೇಶದಿಂದ ಅದನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಪತ್ನಿ ಹಾಗೂ ಅವಳ ಪ್ರೇಮಿಯ ಕರಾಳ ಕೃತ್ಯವನ್ನು ಪೊಲೀಸರು ಭೇದಿಸಿದ್ದಾರೆ.
ರಾಜಸ್ಥಾನದ ಕೋಟ್ಪುಟ್ಲಿ-ಬೆಹ್ರೋರ್ ಜಿಲ್ಲೆಯ ಬಾರ್ದೋಡ್ ಗ್ರಾಮದಲ್ಲಿ ಸತೀಶ್ ಎಂಬ ವ್ಯಕ್ತಿಯ ಶವ ಪತ್ತೆಯಾಗಿದ್ದು, ತನಿಖೆ ವೇಳೆ ಭೀಕರ ಕೊಲೆ ರಹಸ್ಯ ಬಯಲಾಗಿದೆ. ಮೃತ ಸತೀಶ್ ಪತ್ನಿ ರೇಖಾ ಸೈನಿ ಹಾಗೂ ಆಕೆಯ ಪ್ರೇಮಿ ರಾಜೇಶ್ ಅಲಿಯಾಸ್ ರಾಜು ಮಿಸ್ತ್ರಿ ಈ ಕೃತ್ಯದ ಮುಖ್ಯ ರೂವಾರಿಗಳಾಗಿದ್ದಾರೆ.
ಪತಿ ಸತೀಶ್ ತಮ್ಮ ಸಂಬಂಧಕ್ಕೆ ಅಡ್ಡವಾಗಿದ್ದಾನೆ ಎಂದು ಭಾವಿಸಿದ್ದ ಪತ್ನಿ ರೇಖಾ ಸೈನಿ, ತನ್ನ ಪ್ರೇಮಿ ರಾಜೇಶ್ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದಳು. ಯೋಜನೆಯಂತೆ ರಾಜೇಶ್ ಹಾಗೂ ಆತನ ಸ್ನೇಹಿತ ಶಂಶೀರ್ ಎಂಬಾತ ಸತೀಶ್ನನ್ನು ಹರಿಯಾನಾಗೆ ಕರೆಸಿಕೊಂಡಿದ್ದು, ಅಲ್ಲಿ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಬಳಿಕ ಮೃತದೇಹವನ್ನು ರಾಜಸ್ಥಾನಕ್ಕೆ ತಂದು ಬಿಸಾಡಿದ್ದರು. ಶವದ ಮೈಮೇಲಿನ ಗಾಯಗಳು ಹಾಗೂ ತಲೆಯ ಮೇಲಿದ್ದ ಬೆಳೆಗಳ ಅವಶೇಷಗಳನ್ನು ಗಮನಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಂದಿದೆ.
ಕೊಲೆಗೆ ಅಕ್ರಮ ಸಂಬಂಧವೇ ಕಾರಣ: ಪತ್ನಿ ರೇಖಾ ಸೈನಿಯ ಜತೆಗಿನ ಪರಪುರುಷ ಸಂಬಂಧಕ್ಕೆ ಪತಿ ಸತೀಶ್ ಅಡ್ಡಿಯಾಗಿದ್ದರಿಂದ ಈ ಕೊಲೆ ಸಂಚು ರೂಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾ ಹಣದ ಆಸೆ: ಪತಿಯ ಹೆಸರಿನಲ್ಲಿ ಕೆಲ ಜೀವ ವಿಮಾ ಪಾಲಿಸಿಗಳನ್ನು ಮಾಡಿಸಲಾಗಿದ್ದು, ಕೊಲೆಯನ್ನು ರಸ್ತೆ ಅಪಘಾತ ಎಂದು ಬಿಂಬಿಸಿ ಇನ್ಶೂರೆನ್ಸ್ ಕ್ಲೈಮ್ ಹಣ ಪಡೆಯಲು ಆರೋಪಿಗಳು ಯೋಜನೆ ಹಾಕಿದ್ದರು.
ಆರೋಪಿಗಳ ಬಂಧನ: ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪ್ರಮುಖ ಆರೋಪಿಗಳಾದ ರಾಜೇಶ್ ಅಲಿಯಾಸ್ ರಾಜು ಮಿಸ್ತ್ರಿ ಹಾಗೂ ಶಂಶೀರ್ ಅಲಿಯಾಸ್ ಶಿವ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಪತ್ನಿ ರೇಖಾ ಸೈನಿಯ ಪಾತ್ರದ ಕುರಿತು ತೀವ್ರ ತನಿಖೆ ಮುಂದುವರಿದಿದೆ.
ಹರಿಯಾಣದಲ್ಲಿ ಹತ್ಯೆ: ಸತೀಶ್ನನ್ನು ಹರಿಯಾನಾಗೆ ಕರೆಸಿ ಮನಬಂದಂತೆ ಥಳಿಸಿ ಸಾಯಿಸಲಾಗಿದೆ. ಸತೀಶ್ ಹಾಗೂ ರೇಖಾ ದಂಪತಿ ಈಗಾಗಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.




