ನವದೆಹಲಿ: ಭಾರತದಲ್ಲಿ ಸಗಟು ಹಣದುಬ್ಬರವು 4 ವರ್ಷಗಳ ಗರಿಷ್ಠ ಮಟ್ಟವಾದ ಶೇಕಡಾ 12.3 ಕ್ಕೆ ತಲುಪಿದ್ದು, ದೇಶದ ಕೋಟ್ಯಂತರ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ತೀವ್ರ ಪರಿಣಾಮ ಬೀರಿದೆ. ಅಡುಗೆ ಎಣ್ಣೆ, ತರಕಾರಿಗಳು, ಧಾನ್ಯಗಳು ಮತ್ತು ಹಾಲಿನ ಬೆಲೆ ಗಗನಕ್ಕೇರಿದ್ದು, ಶೇಕಡಾ 60 ಕ್ಕೂ ಹೆಚ್ಚು ಭಾರತೀಯ ಕುಟುಂಬಗಳ ಅಗತ್ಯ ವಸ್ತುಗಳ ಖರೀದಿಯ ಮೇಲೆ ನೇರ ಹೊಡೆತ ಬಿದ್ದಿದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಲೋಕಸರ್ಕಲ್ಸ್ ನಡೆಸಿದ ರಾಷ್ಟ್ರಮಟ್ಟದ ಸಮೀಕ್ಷೆಯ ಪ್ರಕಾರ, ಶೇಕಡಾ 98 ರಷ್ಟು ಮಂದಿ ಕಳೆದ 12 ತಿಂಗಳುಗಳಿಗೆ ಹೋಲಿಸಿದರೆ ಅಗತ್ಯ ವಸ್ತುಗಳ ಮೇಲೆ ಹೆಚ್ಚಿನ ಖರ್ಚು ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಕೂಡ ಆರ್‌ಬಿಐ (RBI) ನಿಗದಿಪಡಿಸಿದ ಶೇಕಡಾ 6 ರ ಗರಿಷ್ಠ ಮಿತಿಯನ್ನು ದಾಟಿ ಶೇಕಡಾ 6.09 ಕ್ಕೆ ತಲುಪಿದ್ದು, ಜನಸಾಮಾನ್ಯರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
ಏರಿಕೆಯಾದ ಗೃಹ ಬಳಕೆ ವೆಚ್ಚ: ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 61 ರಷ್ಟು ಕುಟುಂಬಗಳ ಅಗತ್ಯ ವಸ್ತುಗಳ ಮಾಸಿಕ ಖರ್ಚು ಶೇಕಡಾ 20 ಕ್ಕಿಂತ ಹೆಚ್ಚು ಹೆಚ್ಚಾಗಿದೆ. ತುಪ್ಪ, ಬೆಣ್ಣೆ, ಅಡುಗೆ ಎಣ್ಣೆ (ಶೇ. 75), ಹಸಿ ತರಕಾರಿಗಳು (ಶೇ. 73) ಮತ್ತು ಅಕ್ಕಿ-ಗೋಧಿ (ಶೇ. 71) ಬೆಲೆಗಳು ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿವೆ.
ಕುಂಟಿತಗೊಂಡ ಪೌಷ್ಟಿಕಾಂಶ ಆಹಾರ ಬಳಕೆ: ಹಣದುಬ್ಬರದ ಹೊಡೆತದಿಂದಾಗಿ ಶೇಕಡಾ 39 ರಷ್ಟು ಕುಟುಂಬಗಳು ಹಾಲು, ಡೈರಿ ಉತ್ಪನ್ನಗಳು ಹಾಗೂ ಹಣ್ಣು-ತರಕಾರಿಗಳ ಬಳಕೆಯನ್ನು ಕಡಿತಗೊಳಿಸಿವೆ. ಅಲ್ಲದೆ, ಶೇಕಡಾ 39 ರಷ್ಟು ಜನರು ಉಳಿತಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಅಥವಾ ಸಾಲ ಮಾಡುತ್ತಿದ್ದಾರೆ.
ಸಗಟು ಹಣದುಬ್ಬರ ಏರಿಕೆಗೆ ಕಾರಣ: ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಹಣದುಬ್ಬರ ಶೇಕಡಾ 33 ರಷ್ಟು ಏರಿಕೆಯಾಗಿದ್ದು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆ ಶೇಕಡಾ 70.8 ರಷ್ಟು ಜಿಗಿದಿದೆ. ಇದು ಮುಂದಿನ ದಿನಗಳಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲೂ ಬೆಲೆ ಏರಿಕೆಗೆ ಕಾರಣವಾಗುವ ಆತಂಕ ಮೂಡಿಸಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೊರಗೆ ತಿನ್ನುವುದು ಮತ್ತು ಮನರಂಜನಾ ಖರ್ಚುಗಳನ್ನು ಕಡಿತಗೊಳಿಸುತ್ತಿರುವ ಜನಸಾಮಾನ್ಯರು, ಈಗ ನೇರವಾಗಿ ದಿನನಿತ್ಯದ ಆಹಾರ ಕ್ರಮದಲ್ಲೇ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.




