ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇಬ್ಬರು ಯುವಕರು ಪದೇಪದೇ ಕಾರನ್ನು ಅಡ್ಡಗಟ್ಟಿ, ಕಿಟಕಿಯಿಂದ ಹೊರಬಂದು ವಿಚಿತ್ರ ಹಾಗೂ ಅಸಭ್ಯ ಸನ್ನೆಗಳನ್ನು ಮಾಡುತ್ತಾ ಭಯ ಹುಟ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
https://akm-img-a-in.tosshub.com/indiatoday/2026-11/f4c97e94-11a5-4b3a-8279-a5c26045c307.mp4?VersionId=cULLYxAvLS.WeLjrk0qszP_FiPhQKIPQ
ದೆಹಲಿ ನೋಂದಣಿ ಸಂಖ್ಯೆಯ ಹುಂಡೈ ವರ್ನಾ ಕಾರಿನಲ್ಲಿದ್ದ ಇಬ್ಬರು ಯುವಕರು ಕುಟುಂಬದ ಕಾರಿನ ಪಕ್ಕಕ್ಕೆ ಬಂದು ಚಾಲಕ ಪದೇಪದೇ ಲೇನ್ ಬದಲಿಸುತ್ತಾ ದಾರಿ ತಡೆದಿದ್ದಾನೆ.
ಇನ್ನೊಬ್ಬ ವ್ಯಕ್ತಿ ಹಿಂದಿನ ಕಿಟಕಿಯಿಂದ ಹೊರಗೆ ಬಾಗಿ ಕುಟುಂಬದವರನ್ನು ಅಣಕಿಸುವಂತೆ ವಿಚಿತ್ರ ಕೈ ಸನ್ನೆಗಳನ್ನು ಮಾಡಿದ್ದಾನೆ. “ನಾವು ಕುಟುಂಬದೊಂದಿಗೆ ಹೋಗುತ್ತಿದ್ದೇವೆ, ಇವರು ನಮ್ಮ ಕಾರನ್ನು ತಡೆದು ಅಸಭ್ಯವಾಗಿ ವರ್ತಿಸುತ್ತಿದ್ದಾರೆ” ಎಂದು ಕಾರಿನಲ್ಲಿದ್ದವರು ಅಳಲು ತೋಡಿಕೊಳ್ಳುವುದು ವೀಡಿಯೊದಲ್ಲಿ ದಾಖಲಾಗಿದೆ.
28 ಬಾಕಿ ಚಲನ್ ಪತ್ತೆ: ವೀಡಿಯೊ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರೊಬ್ಬರು ಆರ್ಟಿಒ (RTO) ಆ್ಯಪ್ನಲ್ಲಿ ಆರೋಪಿಗಳ ಕಾರಿನ ನಂಬರ್ ಪರಿಶೀಲಿಸಿದಾಗ, ಆ ವಾಹನದ ಮೇಲೆ 28ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ (Traffic Challans) ಪ್ರಕರಣಗಳು ಬಾಕಿ ಇರುವುದು ಬೆಳಕಿಗೆ ಬಂದಿದೆ.
ಪೊಲೀಸರಿಗೆ ದೂರು: ಸಂತ್ರಸ್ತ ಕುಟುಂಬದವರು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿ ವೀಡಿಯೊ ಹಂಚಿಕೊಂಡಿದ್ದು, ವಾಹನದ ನೋಂದಣಿ ಸಂಖ್ಯೆ ಆಧರಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ರಸ್ತೆ ಸುರಕ್ಷತೆ ಬಗ್ಗೆ ಚರ್ಚೆ: ಸಾರ್ವಜನಿಕ ರಸ್ತೆಗಳಲ್ಲಿ ಕುಟುಂಬಗಳಿಗೆ ಎದುರಾಗುತ್ತಿರುವ ಇಂತಹ ರೋಡ್ ರೇಜ್ (Road Rage) ಹಾಗೂ ಪುಂಡಾಟಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





Leave a comment