
ಮುಂಬೈ: ಚೆನ್ನಾಗಿ ನಿದ್ರೆ ಮಾಡುವುದರಿಂದ ಕೇವಲ ಆರೋಗ್ಯ ಮಾತ್ರವಲ್ಲ, ಲಕ್ಷಾಂತರ ರೂಪಾಯಿ ಹಣವನ್ನೂ ಗಳಿಸಬಹುದು ಎಂಬುದನ್ನು ಮುಂಬೈನ ಯುವತಿ ಜಿನಿಯಾ ಚಟರ್ಜಿ ಸಾಬೀತುಪಡಿಸಿದ್ದಾರೆ.
ಪ್ರಸಿದ್ಧ ಹಾಸಿಗೆ ಹಾಗೂ ನಿದ್ರಾ ಪರಿಕರಗಳ ತಯಾರಿಕಾ ಸಂಸ್ಥೆ ‘ವೇಕ್ಫಿಟ್’ ಆಯೋಜಿಸಿದ್ದ ‘ಸ್ಲೀಪ್ ಇಂಟರ್ನ್ಶಿಪ್’ 5ನೇ ಸೀಸನ್ನಲ್ಲಿ ಜಿನಿಯಾ ಚಟರ್ಜಿ ವಿಜೇತರಾಗಿ ಹೊರಹೊಮ್ಮಿದ್ದು, ಬರೋಬ್ಬರಿ 9.6 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಪ್ರಾಯೋಜಿತ ಪ್ರವಾಸದ ಕೊಡುಗೆಯನ್ನು ಪಡೆದುಕೊಂಡಿದ್ದಾರೆ.
ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಅರ್ಜಿದಾರರ ಪೈಕಿ ಆಯ್ಕೆಯಾಗಿದ್ದ 10 ಸ್ಪರ್ಧಿಗಳಿಗೆ 60 ದಿನಗಳ ಕಾಲ ಈ ವಿಶಿಷ್ಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದಿನನಿತ್ಯ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು, ಆರೋಗ್ಯಕರ ನಿದ್ರಾ ಅಭ್ಯಾಸಗಳನ್ನು ಕಾಪಾಡಿಕೊಳ್ಳುವುದು ಮತ್ತು ಸಂಸ್ಥೆ ನೀಡುವ ವಾರಾಂತ್ಯದ ಸವಾಲುಗಳನ್ನು ಪೂರ್ಣಗೊಳಿಸುವುದು ಈ ಇಂಟರ್ನ್ಶಿಪ್ನ ಮುಖ್ಯ ನಿಯಮವಾಗಿತ್ತು.
ವಿಶಿಷ್ಟ ಸವಾಲುಗಳು: ನಿದ್ರೆಗೆ ಸಂಬಂಧಿಸಿದ ಚಲನಚಿತ್ರ ದೃಶ್ಯಗಳನ್ನು ಮರುಸೃಷ್ಟಿಸುವ ‘ಸ್ಲೀಪ್ ಸಿನಿಮಾ’, ಸಂಭಾಷಣೆಯಲ್ಲಿ ರಹಸ್ಯವಾಗಿ ಬೆಡ್ಶೀಟ್ ಅಥವಾ ದಿಂಬು ಪದಗಳನ್ನು ಬಳಸಿ ಗೆಲ್ಲುವ ‘ಅಂಡರ್ಕವರ್ ಸ್ಲೀಪ್ ಮಿಷನ್’ ಹಾಗೂ ‘ಸ್ಲೀಪ್ ಬಿಂಗೊ’ ಮುಂತಾದ ಕ್ರಿಯೇಟಿವ್ ಟಾಸ್ಕ್ಗಳನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು.
ಬಿಗ್ ಬೆಡ್ ಫೈನಲ್: ಹೈದರಾಬಾದ್ನ ಕರೀಮ್ ಖಾನ್, ರತ್ನಗಿರಿ ಮಣಿಕಂಡನ್ ಹಾಗೂ ಮೆಹಕ್ ಖೋಟ್ ಅವರೊಂದಿಗೆ ಫೈನಲ್ ತಲುಪಿದ್ದ ಜಿನಿಯಾ, ಅಂತಿಮ ಹಂತದ ಮೆಮೊರಿ ಫೋಮ್ ಚಾಲೆಂಜ್ ಹಾಗೂ ಸ್ಲೀಪ್ ಆಕ್ಷನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.
ಅಂತಿಮ ನಿರ್ಧಾರ: ಅಂತಿಮ ರಾತ್ರಿಯ ನಿದ್ರೆಯ ಟ್ರ್ಯಾಕಿಂಗ್ ಸ್ಕೋರ್ಗಳು ಮತ್ತು ಪಾಯಿಂಟ್ಸ್ ಆಧಾರದ ಮೇಲೆ ಜಿನಿಯಾ ಚಟರ್ಜಿ ಅತ್ಯುತ್ತಮ ‘ಪ್ರೋ ಸ್ಲೀಪರ್’ ಆಗಿ ಆಯ್ಕೆಯಾದರು.
2019ರಿಂದ ಆರಂಭಗೊಂಡ ಈ ಸ್ಲೀಪ್ ಇಂಟರ್ನ್ಶಿಪ್ ಅಭಿಯಾನಕ್ಕೆ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದು, ಅನೇಕ ಯುವಜನರು ನಿದ್ರೆ ಮಾಡುವುದನ್ನೇ ಕಾಯಕವಾಗಿಸಿಕೊಂಡು ಹಣ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.




