ಬೆಂಗಳೂರು: ಆ್ಯಕ್ಸಿಡೆಂಟಲ್ ಮುಖ್ಯಮಂತ್ರಿಯಾಗಿದ್ದ, ಸಂಸದ ಬಸವರಾಜ್ ಬೊಮ್ಮಾಯಿ ಅಪರೂಪಕ್ಕೆ ಪುರಸೊತ್ತು ಮಾಡಿಕೊಂಡು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅತ್ಯಂತ ಬೇಜಾಬ್ದಾರಿಯಾಗಿ ಮಾತಾಡಿದ್ದಾರೆ. ಬೊಮ್ಮಾಯಿ ಅವ್ರೇ, ವಿದೇಶಿ ಹಣ, ದೇಶದ ಅಖಂಡತೆ, ಏಕತೆಯ ಬಗ್ಗೆ ಮಾತಾಡುವುದೆಂದರೆ ಕೋರ್ಟ್ ಗೆ ಹೋಗಿ “ನನ್ನ ಖಾಸಗೀ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಡಿ” ಎಂದು ಸ್ಟೇ ತಂದಷ್ಟು ಸುಲಭ ಅನ್ಕೊಂಡ್ರಾ? ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಲ್ಲೂ ಇರುತ್ತಾರೆ, ಅವರಿಗೆ ವಿದೇಶದ ಗಣ್ಯಾತಿಗಣ್ಯರ ಸಂಪರ್ಕವೂ ಇದೆ. ಅಷ್ಟಕ್ಕೂ ರಾಹುಲ್ ಗಾಂಧಿ ಅವರು ಜಗತ್ತಿನ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಸಂವಾದ-ಚರ್ಚೆ ನಡೆಸಲು ಹೋಗುತ್ತಾರೆ ಹೊರತು “ಮಹಾಮಾನವನ” ಹಾಗೆ ಎಫ್ಟೀನ್ ಫೈಲ್ ಅಲ್ಲಿ ಬರಲು ಅಲ್ಲ ಬೊಮ್ಮಾಯಿ ಅವರೇ ಎಂದು ಕಿಡಿಕಾರಿದ್ದಾರೆ.
ಬೊಮ್ಮಾಯಿ ಅವರೇ, ರಾಹುಲ್ ಗಾಂಧಿಯವರ ವಿದೇಶಿ ಸಂಪರ್ಕಗಳ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೊದಲು, ಅವರು ವಿದೇಶಿ ಹಣ ಪಡೆದಿದ್ದಾರೆ ಎಂಬ ನಿಮ್ಮ ಆರೋಪಕ್ಕೆ ಒಂದೇ ಒಂದು ಅಧಿಕೃತ ದಾಖಲೆಯನ್ನಾದರೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿ. ವಿದೇಶಿ ನಾಯಕರನ್ನು ಭೇಟಿಯಾಗುವುದು ಅಪರಾಧವಲ್ಲ; ಸಾಕ್ಷ್ಯವಿಲ್ಲದೆ ದೇಶದ ವಿರೋಧ ಪಕ್ಷದ ನಾಯಕರ ಮೇಲೆ ಗಂಭೀರ ಆರೋಪ ಮಾಡುವುದು ಜವಾಬ್ದಾರಿಯುತ ರಾಜಕಾರಣವೂ ಅಲ್ಲ ಎಂದಿದ್ದಾರೆ.
ಆರ್.ಎಸ್.ಎಸ್ ಹಾಗೂ ಬಿಜೆಪಿಗೆ ವಿದೇಶದಿಂದ ಹರಿದು ಬರುತ್ತಿರುವ ಹಣದ ಲಿಂಕ್ ಅನ್ನು ಬಿಜೆಪಿಯ ಮಾತೃ ಸಂಘಟನೆಯಾದ ಆರ್.ಎಸ್.ಎಸ್ ಕೂಡಾ ಸ್ವತಃ ನಿರಾಕರಿಸುವುದಿಲ್ಲ. ಮೊದಲು ಅದಕ್ಕೆ ಉತ್ತರ ನೀಡದೆ ಹೀಗೆ ಉತ್ತರನ ಪೌರುಣ
ತೋರಿಸುವುದು ಹಾಸ್ಯಸ್ಪದ ಎಂದು ವಾಗ್ದಾಳಿ ನಡೆಸಿದ್ದಾರೆ.
2014 ರಿಂದ 2025 ರವರೆಗೆ ಭಾರತದ ಮತದಾನ ಪ್ರಮಾಣ ಹೆಚ್ಚಿಸಲು 21 ಮಿಲಿಯನ್ ಡಾಲರ್ ಗಳನ್ನು ಅಮೇರಿಕಾವು ಭಾರತಕ್ಕೆ ರವಾನಿಸಿತ್ತು ಎಂದು ಎಲಾನ್ ಮಸ್ಕ್ ನೇತೃತ್ವದ DOGE, USAID ಹೇಳಿತ್ತು. ಇದು ಯಾರ ಚುನಾವಣಾ ಲಾಭಕ್ಕಾಗಿ ಎಂಬುದನ್ನು ಈವರೆಗೂ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿಲ್ಲ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ 2025 ಫೆಬ್ರವರಿ 19 ರಂದು ಇದೇ ಆರೋಪವನ್ನು ಪ್ರಸ್ತಾಪಿಸಿದ್ದರು. ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾ ಅಧ್ಯಕ್ಷ ಎನ್ನುವುದಕ್ಕಿಂತಲೂ ಮುಖ್ಯವಾಗಿ ಅವರು ಪ್ರಧಾನಿ ನರೇಂದ್ರ ಮೋದಿಯವರು ‘ಫ್ರೇಂಡ್’ (Freaand) ಎಂಬುದನ್ನು ಬಸವರಾಜ ಬೊಮ್ಮಾಯಿಯವರು ಗಮನಿಸಬೇಕು ಎಂದು ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಗೂ ಮೊದಲು ವಿದೇಶದಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ನಡೆಸಿದ್ದರು. ಭಾರತದ ಇತಿಹಾಸದಲ್ಲೇ ವಿದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ ಏಕೈಕ ರಾಜಕಾರಣಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ಮೋದಿಯನ್ನು ಗೆಲ್ಲಿಸುವಂತೆ ಡೊನಾಲ್ಡ್ ಟ್ರಂಪ್ ಯಾಕೆ ಕರೆ ಕೊಟ್ಟರು ? ಎಂದು ಪ್ರಶ್ನಿಸಿದ್ದಾರೆ.
2019 ರಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಇಮ್ರಾನ್ ಖಾನ್ ಮಾತನಾಡಿ ‘ಬಿಜೆಪಿ ಗೆಲ್ಲಬೇಕು’ ಎಂದು ಹೇಳಿಕೆ ನೀಡಿದ್ದರು. ಆ ಬಳಿಕ ಗೆದ್ದ ಪ್ರಧಾನಿ ಮೋದಿಯವರು ಕರೆಯದೆಯೇ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಧನ್ಯವಾದ ಹೇಳಿ ಬಂದಿದ್ದರು. ಈಗಲೂ ಆರ್ ಎಸ್ ಎಸ್ ಪ್ರಮುಖರು ಪಾಕಿಸ್ತಾನದ ಐಎಸ್ಐ ಜತೆ ರಹಸ್ಯ ಮೀಟಿಂಗ್, ಪದೇ ಪದೇ ಅಮೇರಿಕಾ ಭೇಟಿ ನೀಡುತ್ತಿರುವುದು ಯಾಕೆ ? ಅದಕ್ಕೂ ಭಾರತದ ಚುನಾವಣೆಗೂ ನೇರ ಸಂಬಂಧ ಇಲ್ಲವೇ? ರಾಹುಲ್ ಗಾಂಧಿಯಂತಹ ಮೇರು ವ್ಯಕ್ತಿತ್ವದ ಬಗ್ಗೆ ಮಾತನಾಡುವುದು ಬಿಟ್ಟು, ಹಾವೇರಿ ಕ್ಷೇತ್ರದ ಬಗ್ಗೆ ಗಮನ ಕೊಡಿ ಎಂದು ಕಿಡಿಕಾರಿದ್ದಾರೆ.





Leave a comment