ಠಾಣೆ (ಮಹಾರಾಷ್ಟ್ರ): 16 ವರ್ಷಗಳ ದಾಂಪತ್ಯದ ನಂತರ ಪತಿಯೊಬ್ಬ ತನ್ನ ಹೆಂಡತಿ ಮತ್ತು ನಾಲ್ಕು ಮಕ್ಕಳನ್ನು ಮನೆಯಿಂದ ಆಚೆಗೆ ತಳ್ಳಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಕಲ್ಯಾಣ್ ಈಸ್ಟ್‌ನಲ್ಲಿ ವರದಿಯಾಗಿದೆ. ಸದ್ಯ ಯಾವುದೇ ಆಸರೆಯಿಲ್ಲದೆ ಈ ಮಹಿಳೆ ತನ್ನ ನಾಲ್ಕೂ ಮಕ್ಕಳೊಂದಿಗೆ ರಸ್ತೆಯಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುವಂತಾಗಿದೆ.
ಸಂತ್ರಸ್ತೆ ರುಕ್ಸಾರ್ ಮತ್ತು ಮುಸ್ತಫಾ ಎಂಬುವವರು ೨೦೧೦ರಲ್ಲಿ ವಿವಾಹವಾಗಿದ್ದು, ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಇತ್ತೀಚೆಗೆ ಮುಸ್ತಫಾ, “ನನಗೆ ನೀನು ಇಷ್ಟವಿಲ್ಲ, ನಿನ್ನೊಂದಿಗೆ ಬಾಳಲು ನನಗಿಷ್ಟವಿಲ್ಲ” ಎಂದು ಹೇಳಿ ರುಕ್ಸಾರ್ ಹಾಗೂ ಮಕ್ಕಳನ್ನು ಮನೆಯಿಂದ ಹೊರಹಾಕಿದ್ದಾನೆ. ತಾಯಿಗೆ ನೀಡಿದ್ದ ಮಾತಿಗೆ ಕಟ್ಟುಬಿದ್ದು ಮಾತ್ರ ಮದುವೆಯಾಗಿದ್ದಾಗಿ ಆತ ಸಮರ್ಥಿಸಿಕೊಂಡಿದ್ದಾನೆ ಎನ್ನಲಾಗಿದೆ.
ಅಮಾನವೀಯ ಹಲ್ಲೆ: ಮನೆ ಹಕ್ಕನ್ನು ಕೇಳಲು ಅತ್ತೆ-ಮಾವಂದಿರ ಮನೆಗೆ ಹೋದಾಗ ರುಕ್ಸಾರ್ ಮತ್ತು ಮಕ್ಕಳ ಮೇಲೆ ಪತಿ ಹಾಗೂ ಆತನ ಕುಟುಂಬದವರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ವೈರಲ್ ವಿಡಿಯೋ: ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ಪ್ರಕರಣವು ಸಾರ್ವಜನಿಕವಾಗಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ.
ಪೋಲಿಸ್ ದೂರು: ಸಂತ್ರಸ್ತ ಮಹಿಳೆ ಕಲ್ಯಾಣ್ ಈಸ್ಟ್‌ನ ಕೊಲ್ಶೇವಾಡಿ ಪೊಲೀಸ್ ಠಾಣೆಗೆ ತೆರಳಿ ಪತಿ ಮುಸ್ತಫಾ ಮತ್ತು ಆತನ ಕುಟುಂಬದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ರುಕ್ಸಾರ್ ನ್ಯಾಯಕ್ಕಾಗಿ ಪೋಲಿಸರ ಬಾಗಿಲು ತಟ್ಟಿದ್ದು, ತನಗೆ ಮತ್ತು ತನ್ನ ಮಕ್ಕಳಿಗೆ ತಕ್ಷಣದ ರಕ್ಷಣೆ ಹಾಗೂ ನ್ಯಾಯ ಸಿಗಬೇಕೆಂದು ಆಗ್ರಹಿಸಿದ್ದಾರೆ.





Leave a comment