ಹಿರಿಯೂರು: “ನಾನು ಹಾಗೂ ನಮ್ಮ ಸಚಿವರು ಹಿರಿಯೂರು ಕ್ಷೇತ್ರಕ್ಕೆ ಬರಿಗೈನಲ್ಲಿ ಬಂದಿಲ್ಲ. ಕ್ಷೇತ್ರಕ್ಕೆ ಅಭಿವೃದ್ಧಿಯ ಲಕ್ಷಿಯನ್ನು ಕರೆತಂದಿದ್ದೇವೆ” ಎಂದು ಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಧರ್ಮಪುರದಲ್ಲಿ ನೂತನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಕಾಮಗಾರಿಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
“2200 ಕೋಟಿಯಷ್ಟು ಮೊತ್ತದ ಕಾಮಗಾರಿಗಳನ್ನು ವಿವಿಧ ಇಲಾಖೆಗಳ ಮೂಲಕ ಆದೇಶ ಹೊರಡಿಸಿದ್ದೇವೆ. ಪಂಚಾಯತ್ ರಾಜ್ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ ಅವರು ಈ ಕ್ಷೇತ್ರದಲ್ಲಿ ಯೋಜನೆಗಳ ಜಾರಿಗೆ ಮುಂದಾಗಿದ್ದಾರೆ. ಪ್ರತಿ ಊರಿನಲ್ಲಿ, ಹಳ್ಳಿಗಳ ರಸ್ತೆ ಏನಾಗಬೇಕು ಎಂದು ಪಟ್ಟಿ ತಯಾರು ಮಾಡಿದ್ದೇವೆ. ಮಾಜಿ ಶಾಸಕರಾದ ಪೂರ್ಣಿಮಾ ಅವರು ಅವರ ಪತಿ ಶ್ರೀನಿವಾಸ್ ಅವರು ನಿಮ್ಮ ಮುಂದೆ ಕೂತಿದ್ದಾರೆ. ನಾನು ಅವರ ತಂದೆ ಒಟ್ಟಾಗಿ ಕೆಲಸ ಮಾಡಿದವರು. ಹಿರಿಯೂರಿನಲ್ಲಿ ಜನರ ವಿಶ್ವಾಸ ಗಳಿಸಿ ಕೆಲಸ ಮಾಡಿದ್ದಾರೆ. ಅವರು ಈ ಹಿಂದೆ ಬೇರೆ ಪಕ್ಷದಿಂದ ಸ್ಪರ್ಧಿಸಿದ್ದರೂ ಈ ರಾಜ್ಯಕ್ಕೆ ಭವಿಷ್ಯ ಇರುವುದು ಕಾಂಗ್ರೆಸ್ ನಿಂದ ಮಾತ್ರ ಎಂದು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ನಿಮ್ಮ ಸೇವೆ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
“ನಾನು ಈ ಕಾರ್ಯಕ್ರಮಕ್ಕೆ ಬಹಳ ದುಖಃದಿಂದ ಬಂದಿರುವೆ. ನಾನು ಸಿಎಂ ಆಗಿರುವಾಗ ಸುಧಾಕರ್ ಇದ್ದಿದ್ದರೆ ಆತ ಎಷ್ಟು ಸಂತೋಷ ಪಡುತ್ತಿದ್ದ ಎಂಬುದಕ್ಕೆ ನಮ್ಮ ಸಹೋದ್ಯೋಗಿಗಳೇ ಸಾಕ್ಷಿ. ಆತ ಸಾಯುವ 2 ತಿಂಗಳ ಮುನ್ನ. ನಾನು ಮಂತ್ರಿಯಾಗಿ ಇಲ್ಲದಿದ್ದರೂ ಚಿಂತೆ ಇಲ್ಲ. ನನ್ನ ಸ್ನೇಹಿತ ಡಿ ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿದ್ದ ಸ್ನೇಹಿತ. ಆತನ ಕನಸು, ಈ ಜನರ ಮೇಲೆ ಇಟ್ಟಿದ್ದ ಪ್ರೀತಿ ಅಪಾರ. ಆತನಿಗೆ ಜಾತಿ ಧರ್ಮ ಇರಲಿಲ್ಲ. ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದ. ನಾನು ಪ್ರಜಾಸೇವಕನಾಗಿ ನಿಮ್ಮ ಮುಂದೆ ನಿಂತಿರುವೆ” ಎಂದರು.
“ಸಮಾಜಕಲ್ಯಾಣ ಇಲಾಖೆಯಿಂದ ಎಲ್ಲಾ ಜಾತಿ, ಸಮುದಾಯಗಳಿಗೆ ಸಂಬಂಧಿಸಿದ ಸಮುದಾಯ ಭವನಗಳನ್ನು ನಿರ್ಮಿಸಲು ಆದೇಶ ನೀಡಲಾಗಿದೆ. ಬಾಲಕೃಷ್ಣ ಅವರು ನಿಮ್ಮ ಸಮಸ್ಯೆ ಹೇಳಿದ್ದಾರೆ. ಒಕ್ಕಲಿಗರ ಸಮುದಾಯ ಭವನ ಬೇಕು ಎಂದರು ಅದಕ್ಕೆ 5 ಕೋಟಿ ರೂ. ಅನುದಾನ ಮಂಜೂರಾತಿ ನೀಡಿದ್ದೇನೆ. ಗೊಲ್ಲರ ಸಮುದಾಯ ಭವನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಕನಕ ಭವನಕ್ಕೂ ಅನುದಾನ ನೀಡಲಾಗುವುದು. ಈ ಸರ್ಕಾರಕ್ಕೆ ನೀವು ಶಕ್ತಿ ತುಂಬಬೇಕು” ಎಂದು ಕರೆ ನೀಡಿದರು.
“ಜಮೀರ್ ಅಹ್ಮದ್ ಹಾಗೂ ಪರಮೇಶ್ವರ್ ಅವರು ಈ ವರ್ಷ ರಾಜ್ಯದಲ್ಲಿ ನಿವೇಶನರಹಿತರಿಗೆ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿದ್ದಾರೆ. ಸರ್ಕಾರಿ ಜಾಗದಲ್ಲಿ ಅದು ಇಲ್ಲವಾದರೆ ಖಾಸಗಿ ಜಮೀನು ಖರೀದಿಸಿ ನಿವೇಶನ ನೀಡಲಾಗುವುದು. ಈ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನಿನ ಪಟ್ಟಿ ನೀಡಿದ್ದಾರೆ.
ಪ್ರಜಾಸೇವೆ ಮೂಲಕ ನಿವೇಶಕ್ಕೆ ಬರುವ ಅರ್ಜಿಗಳಿಗೆ ಸ್ಪಂದಿಸಲಾಗುವುದು. ಪ್ರಜಾಸೇವೆ ಅಭಿಯಾನದಲ್ಲಿ ನೀವು ನಿಮ್ಮ ಮನವಿಯನ್ನು ಸರ್ಕಾರ ಕೊಡುವ ಅರ್ಜಿಯಲ್ಲಿ ನಮೂದಿಸಿ ಕೊಟ್ಟರೆ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು. ಇನ್ನು ಭೂಮಿ ಗ್ಯಾರಂಟಿ ಮೂಲಕ ಎಲ್ಲರ ಆಸ್ತಿ ದಾಖಲೆಗಳನ್ನು ಸರಿಪಡಿಸಿಕೊಡಲು ಸರ್ಕಾರ ಮುಂದಾಗಿದೆ. ಸಣ್ಣ ನಿವೇಶನವಿದ್ದರೂ ಅವರ ದಾಖಲೆಗೆ ಅವರ ಫೋಟೋಗಳನ್ನು ಹಾಕಿ, ಪೋಡಿ ಮಾಡಿ ದಾಖಲೆ ನೀಡಲಾಗುವುದು. ಇದಕ್ಕಾಗಿ ಆಂದೋಲನ ಮಾಡುತ್ತಿದ್ದೇವೆ. ವಿಜಯನಗರದಲ್ಲಿ 1.11 ಲಕ್ಷ ಬುಡಕಟ್ಟು ಜನರಿಗೆ ಅವರ ಜಮೀನಿನ ದಾಖಲೆ ಪತ್ರಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಇಂತಹ ಕೆಲಸ ಬಿಜೆಪಿ ಹಾಗೂ ದಳದವರು ಯಾಕೆ ಮಾಡಲಿಲ್ಲ?” ಎಂದು ಪ್ರಶ್ನಿಸಿದರು.





Leave a comment