ಖನ್ನಾ (ಪಂಜಾಬ್): ಹಿಂದೂ ಧರ್ಮಗುರುಗಳೊಬ್ಬರ ಮನೆಯಲ್ಲಿ ಪೊಲೀಸರೇ ಡ್ರಗ್ಸ್ ಇಟ್ಟು ಸಿಲುಕಿಸಲು ಯತ್ನಿಸಿರುವ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ಭಾರೀ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಪಂಜಾಬ್ನ ಖನ್ನಾ ನಗರದ ಮಹಂತ್ ಕಾಶ್ಮೀರಿ ಗಿರಿ ಎಂಬುವವರ ಮನೆಯ ಮೇಲೆ ದಾಳಿ ನಡೆಸುವ ಮುನ್ನ, ಸಿಐಎ ಸಿಬ್ಬಂದಿಗೆ ಸೇರಿದ ಎಎಸ್ಐ ಸುಖದೇವ್ ಸಿಂಗ್ ಕೋಣೆಯ ಹಾಸಿಗೆಯ ಅಡಿಯಲ್ಲಿ ಹೆರಾಯಿನ್ ಪ್ಯಾಕೆಟ್ ಅನ್ನು ರಹಸ್ಯವಾಗಿಡುತ್ತಿರುವುದು ಗುಪ್ತ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಗಂಭೀರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಎಸ್ಐ ಸುಖದೇವ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ದೇವಸ್ಥಾನದ ಪೂಜಾರಿಯನ್ನು ಪ್ರಕರಣದಿಂದ ಬಿಡುಗಡೆ ಮಾಡಲಾಗಿದೆ.
ಚಾಲಕನೊಬ್ಬನ ಬಂಧನದ ಬಳಿಕ ಆತನ ಹೇಳಿಕೆಯಂತೆ ಪೊಲೀಸರು ಮಹಂತ್ ಕಾಶ್ಮೀರಿ ಗಿರಿ ಅವರ ಮನೆಗೆ ಶೋಧನಾ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಹಾಸಿಗೆಯಡಿಯಿಂದ 30 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ ಪೊಲೀಸರು ಹೇಳಿಕೊಂಡಿದ್ದರು. ಆದರೆ ಮನೆಯಲ್ಲಿದ್ದ ಗುಪ್ತ ಕ್ಯಾಮೆರಾದ ವಿಡಿಯೋ ಪರಿಶೀಲಿಸಿದಾಗ ಪೊಲೀಸರ ಕೃತ್ಯ ಬಯಲಾಗಿದೆ. ವಿಡಿಯೋದಲ್ಲಿ ಪೊಲೀಸ್ ತಂಡ ಬರುವ ಮುಂಚೆಯೇ ಸಿವಿಲ್ ಬಟ್ಟೆಯಲ್ಲಿದ್ದ ಎಎಸ್ಐ ಒಳಪ್ರವೇಶಿಸಿ ಡ್ರಗ್ಸ್ ಇಟ್ಟಿರುವುದು ಸ್ಪಷ್ಟವಾಗಿದೆ.
ಗುಪ್ತ ಕ್ಯಾಮೆರಾದಲ್ಲಿ ಸೆರೆಯಾದ ಕೃತ್ಯ: ದಾಳಿಗೂ ಮುನ್ನವೇ ಒಳಗೆ ನುಗ್ಗಿದ ಎಎಸ್ಐ ಸುಖದೇವ್ ಸಿಂಗ್ ಹಾಸಿಗೆಯ ಮೆತ್ತೆಯ ಕೆಳಗೆ ಡ್ರಗ್ಸ್ ಪ್ಯಾಕೆಟ್ ಇಡುತ್ತಿರುವುದು ವಿಡಿಯೋದಲ್ಲಿದೆ. ನಂತರ ಪೊಲೀಸರು ಬಂದು ಅದೇ ಸ್ಥಳದಿಂದ ಡ್ರಗ್ಸ್ ವಶಪಡಿಸಿಕೊಂಡಂತೆ ನಾಟಕವಾಡಿದ್ದಾರೆ.
ಎಸ್ಐಟಿ ತನಿಖೆಗೆ ಆದೇಶ: ಘಟನೆಯ ಗಂಭೀರತೆಯನ್ನು ಪರಿಗಣಿಸಿ ಎಸ್ಪಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದ್ದು, ವಿಡಿಯೋದ ಸತ್ಯಾಸತ್ಯತೆ ಮತ್ತು ಇತರ ಪೊಲೀಸ್ ಸಿಬ್ಬಂದಿಯ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.
ಆಪ್ ಸರ್ಕಾರದ ವಿರುದ್ಧ ಮುಗಿಬಿದ್ದ ಅಕಾಲಿ ದಳ: ಪಂಜಾಬ್ ಪೊಲೀಸ್ ಇಲಾಖೆಯ ಈ ಅಕ್ರಮ ಕೃತ್ಯವನ್ನು ಖಂಡಿಸಿರುವ ಶಿರोमಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರು, ಆಪ್ ಸರ್ಕಾರದ ‘ಕಾನೂನು ಮತ್ತು ಸುವ್ಯವಸ್ಥೆ’ ಮಾದರಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.





Leave a comment