ದಾವಣಗೆರೆ: ರಾಜ್ಯದಲ್ಲಿ ಹಾಲಿನ ದರ ದಿಢೀರ್ ಏರಿಕೆಯಾಗಿದ್ದು, ಅರ್ಧ ಲೀಟರ್ ಹಾಲಿನ ಬೆಲೆ 27 ರೂಪಾಯಿ ಇದ್ದದ್ದು ಈಗ 33 ರೂಪಾಯಿಗೆ ತಲುಪಿದೆ. ರಾಜ್ಯ ಸರ್ಕಾರದ ಈ ನಿರ್ಧಾರ ಖಂಡನೀಯ. ದರ ಏರಿಕೆ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನಡೆಗೆ ವಿರೋಧವಿದೆ. ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ದಾವಣಗೆರೆ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೇತನಾ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಹಾಲಿನ ದರ ಹೆಚ್ಚಳದಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಗೃಹಿಣಿಯರ ಜೇಬಿಗೆ ನೇರ ಕತ್ತರಿ ಬೀಳುತ್ತದೆ. ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. 8 ರೂಪಾಯಿ ಹೆಚ್ಚಳದಲ್ಲಿ 7 ರೂಪಾಯಿಯನ್ನು ರೈತರಿಗೆ ನೀಡಲಾಗುವುದು ಎಂದು ಸರ್ಕಾರ ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಗ್ರಾಹಕರಿಂದ 13 ರೂಪಾಯಿ ವಸೂಲಿ ಮಾಡುತ್ತಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಅರ್ಧ ಲೀಟರ್ ಹಾಲಿನ ದರ ಏಕಾಏಕಿ 27 ರೂ. ನಿಂದ 33 ರೂ. ಗೆ ಏರಿಕೆಯಾಗಿರುವುದರಿಂದ ಸಾಮಾನ್ಯ ಕುಟುಂಬಗಳ ಬಜೆಟ್ ಸಂಪೂರ್ಣ ಏರುಪೇರಾಗಿದೆ. “8 ರೂಪಾಯಿಯಲ್ಲಿ 7 ರೂಪಾಯಿ ರೈತರಿಗೆ ನೀಡುತ್ತೇವೆ ಎಂದು ಹೇಳಿ, ಈಗ 13 ರೂಪಾಯಿ ವಸೂಲಿ ಮಾಡುತ್ತಿದ್ದೀರಿ. ಉಳಿದ 5 ರೂಪಾಯಿಗಳನ್ನು ನೀವು ಮತ್ತು ನಿಮ್ಮ ಸಂಪುಟ ಸಹೋದ್ಯೋಗಿಗಳು ಹಂಚಿಕೊಳ್ಳುತ್ತೀರಾ?” ಎಂದು ಡಿ.ಕೆ. ಶಿವಕುಮಾರ್ ಅವರನ್ನು ಚೇತನಾ ಶಿವಕುಮಾರ್ ನೇರವಾಗಿ ಪ್ರಶ್ನಿಸಿದ್ದಾರೆ.
ರೈತರ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದ್ದು, ತಕ್ಷಣವೇ ಹೆಚ್ಚಿಸಿದ ಹಾಲಿನ ದರವನ್ನು ಹಿಂಪಡೆಯಬೇಕು. ಈ ಹಿಂದೆ 2 ರೂಪಾಯಿ ಸಹಾಯಧನ ನೀಡುವುದಾಗಿ ಘೋಷಿಸಿದ್ದರೂ ರೈತರಿಗೆ ತಲುಪುತ್ತಿಲ್ಲ. ಈಗ ಒಂದು ಲೀಟರ್ ಗೆ 13 ರೂಪಾಯಿ ಏರಿಕೆ ಮಾಡಿ ಜನರ ಬದುಕಿನ ಮೇಲೆ ಗದಾಪ್ರಹಾರ ಮಾಡಿರುವ ರಾಜ್ಯ ಸರ್ಕಾರವು ಆಡಳಿತದಲ್ಲಿ ಮುಂದುವರಿಯಲು ನೈತಿಕತೆ ಉಳಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.





Leave a comment