Home ಕ್ರೈಂ ನ್ಯೂಸ್ ಆಮಿಷವೊಡ್ಡಿ ಮಹಿಳೆಯರ ಶೋಷಣೆ: ಅಂಡಾಣು ದಾನ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರಿಂದ 43 ಮಹಿಳೆಯರ ರಕ್ಷಣೆ, 8 ಮಂದಿ ಅರೆಸ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಆಮಿಷವೊಡ್ಡಿ ಮಹಿಳೆಯರ ಶೋಷಣೆ: ಅಂಡಾಣು ದಾನ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರಿಂದ 43 ಮಹಿಳೆಯರ ರಕ್ಷಣೆ, 8 ಮಂದಿ ಅರೆಸ್ಟ್!

Share
ಮಹಿಳೆ
Share

ಹೈದರಾಬಾದ್: ಹೈದರಾಬಾದ್‌ನಲ್ಲಿ ಅಂತರರಾಜ್ಯ ಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಂಡಾಣು  ಕಳ್ಳಸಾಗಣೆ ಮತ್ತು ವಾಣಿಜ್ಯ ಶೋಷಣೆಯ ಅಕ್ರಮ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ವಿಶೇಷ ಕಾರ್ಯಾಚರಣೆ ತಂಡದ (SOT) ನೇತೃತ್ವದಲ್ಲಿ ನಡೆಸಿದ ದಾಳಿಯಲ್ಲಿ 43 ಮಹಿಳೆಯರನ್ನು ರಕ್ಷಿಸಲಾಗಿದ್ದು, 8 ಆರೋಪಿಗಳನ್ನು ಬಂಧಿಸಲಾಗಿದೆ.

ಬೇಗಂಪೇಟೆ, ಸರೂರ್‌ನಗರ ಹಾಗೂ ಮಲ್ಕಾಜ್‌ಗಿರಿ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಮಹಿಳೆಯರನ್ನು ಆಮಿಷವಡ್ಡಿ ಹೈದರಾಬಾದ್‌ಗೆ ಕರೆತರಲಾಗುತ್ತಿತ್ತು. ಫಲವತ್ತತೆ ಕೇಂದ್ರಗಳು ಮತ್ತು ಎಆರ್‌ಟಿ ಬ್ಯಾಂಕ್‌ಗಳನಂಟಿನೊಂದಿಗೆ ಈ ಅಕ್ರಮ ದಂಧೆ ನಡೆಸಲಾಗುತ್ತಿದ್ದು, ತನಿಖೆ ಮುಂದುವರಿದಿದೆ.

ಬಂಧಿತರಾದ ಆ ಎಂಟು ಮಂದಿ ಯಾರು?

ಬಂಧಿತರಲ್ಲಿ ಅಮಿತ್ ಶರ್ಮಾ (44) ಕೂಡ ಸೇರಿದ್ದು, ಇವರು ಈ ಜಾಲದ ಪ್ರಮುಖ ಸಂಘಟಕರೆಂದು ಶಂಕಿಸಲಾಗಿದೆ. ಹಾಗೆಯೇ, ಮಹಿಳೆಯರನ್ನು ನೇಮಕ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ನಿಕ್ಕತ್ ಪರ್ವೀನ್ (31) ಕೂಡ ಬಂಧಿತರಾಗಿದ್ದು, ಇವರು ಸಹ-ಸಂಘಟಕರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇತರ ಆರೋಪಿಗಳೆಂದರೆ ಐವಿಎಫ್ (IVF) ಏಜೆಂಟ್ ಮತ್ತು ಉಪ-ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರೇಷ್ಮಾ ಖಾತೂನ್ (26); ವೈದ್ಯಕೀಯ ಸೌಲಭ್ಯಗಳ ಸಮನ್ವಯದಲ್ಲಿ ತೊಡಗಿಸಿಕೊಂಡಿದ್ದ ಮೇಘಾವತ್ ಶ್ರೀನಿವಾಸ್ ಅಲಿಯಾಸ್ ಸೋನು (23); ಮತ್ತು ಎಆರ್‌ಟಿ (ART – Assisted Reproductive Technology) ಬ್ಯಾಂಕ್ ವ್ಯವಸ್ಥಾಪಕರಾದ ಜೆಪ್ರಾಯ್ ಪ್ರದೀಪ್ (27), ಎಸ್‌ಕೆ ಪರ್ವೀನ್ (42) – ಇವರ ನಿರ್ದಿಷ್ಟ ಪಾತ್ರದ ಬಗ್ಗೆ ಪರಿಶೀಲನೆ ನಡೆಯುತ್ತಿದೆ; ‘ಬಟರ್‌ಫ್ಲೈ ಬಯೋ & ಎಆರ್‌ಟಿ ಬ್ಯಾಂಕ್’ನಲ್ಲಿ ದಾಖಲೆಗಳ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದ ವಿಜಯ್ ಭಾಗ್ವಾ ರಾವ್ ಸಾಳುಂಕೆ (46); ಹಾಗೂ ಸಮನ್ವಯ ಮತ್ತು ಮಧ್ಯವರ್ತಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಪಂಕಜ್ ಸೋನಿ (52).

ಆರ್ಥಿಕ ಆಮಿಷ ಮತ್ತು ಶೋಷಣೆ: ಪ್ರತಿ ಅಂಡಾಣು ದಾನ ಚಕ್ರಕ್ಕೆ 20,000 ರೂ. ದಿಂದ 30,000 ರೂ. ನೀಡುವುದಾಗಿ ನಂಬಿಸಿ ಮಹಿಳೆಯರನ್ನು ಕರೆತಂದು ಬಾಡಿಗೆ ಮನೆಗಳಲ್ಲಿ ಇರಿಸಿಕೊಳ್ಳಲಾಗಿತ್ತು.

ವೈದ್ಯಕೀಯ ಸಾಮಗ್ರಿಗಳು ಜಪ್ತಿ: ದಾಳಿಯ ವೇಳೆ ಹಾರ್ಮೋನ್ ಇಂಜೆಕ್ಷನ್‌ಗಳು, ಸಿರಿಂಜಿಗಳು, ಸೂಜಿಗಳು ಹಾಗೂ ವೈದ್ಯಕೀಯ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಠಿಣ ಕಾನೂನು ಕ್ರಮ: ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬಿಎನ್ಎಸ್ (BNS) ಕಾಯ್ದೆ ಹಾಗೂ ಎಆರ್‌ಟಿ  ಕಾಯ್ದೆಯಡಿ ಆರೋಪಿಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಲಾಗುತ್ತಿದೆ.

ಅಕ್ರಮವಾಗಿ ದಾಖಲೆಗಳು, ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಒಪ್ಪಿಗೆ ನಮೂನೆಗಳನ್ನು ಸೃಷ್ಟಿಸಿ ಈ ಜಾಲವನ್ನು ನಡೆಸುತ್ತಿದ್ದ ಪ್ರಮುಖ ಸಂಘಟಕ ಅಮಿತ್ ಶರ್ಮಾ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ವಿಸ್ತೃತ ತನಿಖೆ ನಡೆಯುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles