ದರ್ಭಾಂಗ (ಬಿಹಾರ): ರಕ್ತ ಸಂಬಂಧಗಳನ್ನೆಲ್ಲ ಗಾಳಿಗೆ ತೂರಿ, ಸ್ವಂತ ಅಕ್ಕನ ಪತಿಯನ್ನೇ ರಹಸ್ಯವಾಗಿ ಮದುವೆಯಾಗಿರುವ ಆಘಾತಕಾರಿ ಹಾಗೂ ವಿಚಿತ್ರ ಘಟನೆಯೊಂದು ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಬಿಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉರ್ದು ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುನೀತಾ ಕುಮಾರಿ ಎಂಬಾಕೆ ಈ ಕೃತ್ಯ ಎಸಗಿದ್ದಾಳೆ ಎಂದು ಸಂತ್ರಸ್ತೆ ಅಕ್ಕ ಆರೋಪಿಸಿದ್ದಾರೆ.
ಸುಖಮಯ ದಾಂಪತ್ಯಕ್ಕೆ ತಂಗಿಯ ಕನ್ನ:
ಸಂತ್ರಸ್ತೆ ಪ್ರೀತಿ ದೇವಿ ಅವರು ನೀಡಿರುವ ಮಾಹಿತಿಯಂತೆ, 2014ರಲ್ಲಿ ಅವರಿಗೆ ವಿಜೇಂದ್ರ ಕುಮಾರ್ ಸಿಂಗ್ ಜೊತೆ ಶಾಸ್ತ್ರೋಕ್ತವಾಗಿ ವಿವಾಹವಾಗಿತ್ತು. ಇಬ್ಬರ ದಾಂಪತ್ಯ ಜೀವನವು ಅತ್ಯಂತ ಸುಖಮಯವಾಗಿ ಸಾಗುತ್ತಿದ್ದು, ದಂಪತಿಗೆ ಚಿಕ್ಕ ಮಕ್ಕಳಿದ್ದಾರೆ. ಆದರೆ, 2025ರ ಜೂನ್ 16ರಂದು ಸುನೀತಾ ಕುಮಾರಿ ತನ್ನ ಭಾವ ವಿಜೇಂದ್ರನಿಗೆ ಆಮಿಷ ಒಡ್ಡಿ, ಅಕ್ಕನಿಗೆ ಯಾವುದೇ ಸುಳಿವು ನೀಡದೆ ರಹಸ್ಯವಾಗಿ ನ್ಯಾಯಾಲಯದಲ್ಲಿ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದಾಳೆ.
ಈ ಕೌಟುಂಬಿಕ ವಂಚನೆ ಹಾಗೂ ಮಾನಸಿಕ ಕಿರುಕುಳದ ಕುರಿತು ಸಂತ್ರಸ್ತೆ ಪ್ರೀತಿ ದೇವಿ ಸಾಕ್ಷ್ಯಾಧಾರಗಳೊಂದಿಗೆ ದರ್ಭಾಂಗ ಜಿಲ್ಲಾ ಶಿಕ್ಷಣಾಧಿಕಾರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿರುವ ಡಿಇಒ ವಿದ್ಯಾ ನಂದ ಠಾಕೂರ್ ಪ್ರತಿಕ್ರಿಯಿಸಿ, “ಆರೋಪ ಎದುರಿಸುತ್ತಿರುವ ಶಿಕ್ಷಕಿಗೆ ಅಧಿಕೃತ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಆಕೆಯಿಂದ ಬರವಣಿಗೆಯ ಸ್ಪಷ್ಟನೆ ಬಂದ ನಂತರ ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕಠಿಣ ಇಲಾಖಾ ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು” ಎಂದು ತಿಳಿಸಿದ್ದಾರೆ.





Leave a comment