ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಇಂದು ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿಯ ವಿಸರ್ಜನಾ ಅಂಗವಾಗಿ ಅತ್ಯಂತ ವಿಜೃಂಭಣೆಯಿಂದ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಭವ್ಯ ಮೆರವಣಿಗೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಹಿಂದೂ ಬಾಂಧವರನ್ನು ಉದ್ದೇಶಿಸಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಬ್ಬರದ ಭಾಷಣ ಮಾಡಿದರು.
ಶೋಭಾಯಾತ್ರೆಗೆ ಅಧಿಕೃತ ಚಾಲನೆ ನೀಡುವ ಮುನ್ನ ವಿಘ್ನನಿವಾರಕ ಶ್ರೀ ವಿಘ್ನೇಶ್ವರನಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಸಲ್ಲಿಸಿ, ಸಮಸ್ತ ನಾಡಿನ ಜನತೆಗೆ ಸುಖ, ಶಾಂತಿ ಮತ್ತು ಸಮೃದ್ಧಿ ಲಭಿಸಲೆಂದು ಯತ್ನಾಳ್ ಪ್ರಾರ್ಥಿಸಿದರು. ಇದೇ ವೇಳೆ ಕಾರ್ಯಕ್ರಮ ಆಯೋಜಕರು ಹಾಗೂ ಸಮಿತಿಯ ಪದಾಧಿಕಾರಿಗಳು ಗಣ್ಯರನ್ನು ಆತ್ಮೀಯವಾಗಿ ಸನ್ಮಾನಿಸಿದರು.
ಈ ಬೃಹತ್ ಶೋಭಾಯಾತ್ರೆಯಲ್ಲಿ ಶಾಸಕ ಬಿ. ಪಿ. ಹರೀಶ್, ಮಾಜಿ ಶಾಸಕ ಶಿವಶಂಕರ್ ಸೇರಿದಂತೆ ವಿವಿಧ ಹಿರಿಯ ಮುಖಂಡರು, ಅಭಿಮಾನಿಗಳು, ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಧರ್ಮಬಾಂಧವರು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಯತ್ನಾಳ್ ಮಾತನಾಡಿ ಹಿಂದೂ ಸಮಾಜವು ಜಾತಿ, ಮತ, ಪಂಥಗಳ ಗಡಿ ದಾಟಿ ಒಗ್ಗಟ್ಟಾಗಬೇಕಿದೆ. ಸನಾತನ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಯುವಜನತೆ ಒಂದಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಹಿಂದೂ ಮಹಾಗಣಪತಿ ಉತ್ಸವದ ಮಹತ್ವ:
ಹರಿಹರದಲ್ಲಿ ಪ್ರತಿಯೊಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿ ಮತ್ತು ಶ್ರದ್ಧೆಯಿಂದ ನಡೆಯುತ್ತಿರುವುದು ಅಭಿನಂದನೀಯ. ಗಣೇಶೋತ್ಸವವು ಬೇವಲ ಹಬ್ಬವಲ್ಲ, ಅದು ಸಮಾಜವನ್ನು ಸಂಘಟಿಸುವ ಪ್ರಮುಖ ಶಕ್ತಿ ಎಂದು ಬಣ್ಣಿಸಿದರು.
ಧರ್ಮ ರಕ್ಷಣೆ ಮತ್ತು ಕಾರ್ಯಕರ್ತರ ಉತ್ಸವ:
ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದ ಅವರು, ಧರ್ಮ ರಕ್ಷಣೆ ಮತ್ತು ಸಾಂಸ್ಕೃತಿಕ ಹಕ್ಕುಗಳಿಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ಮುನ್ನಡೆಯಬೇಕು ಎಂದರು.
ರಾಜ್ಯ ಸರ್ಕಾರ ಮತ್ತು ಶಾಂತಿ-ಸುವ್ಯವಸ್ಥೆ ವಿಚಾರ:
ಹಬ್ಬಗಳು ಮತ್ತು ಶೋಭಾಯಾತ್ರೆಗಳ ಸಂದರ್ಭದಲ್ಲಿ ಅನಗತ್ಯ ಕಿರುಕುಳ ಅಥವಾ ನಿರ್ಬಂಧಗಳನ್ನು ವಿಧಿಸುವುದರ ವಿರುದ್ಧ ಕಿಡಿಕಾರಿದರು. ಯಾವುದೇ ಅಡೆತಡೆಗಳು ಬಂದರೂ ಶಾಂತಿಯುತ ಹಾಗೂ ವಿಜೃಂಭಣೆಯ ಆಚರಣೆಗೆ ಹಿಂದೂ ಬಾಂಧವರ ಬೆಂಬಲ ಸದಾ ಇರುತ್ತದೆ ಎಂದರು.





Leave a comment