ತಿರುವನಂತಪುರ/ಬೆಂಗಳೂರು: ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಆಂತರಿಕ ಅಭಿಪ್ರಾಯ ಭೇದದ ವಿಚಾರವಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗಳು ತೀವ್ರ ರಾಜಕೀಯ ಸಮರಕ್ಕೆ ಕಾರಣವಾಗಿವೆ. ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು. ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗದ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ರಾಹುಲ್ ಗಾಂಧಿ ಆರೋಪ: ಚುನಾವಣಾ ಆಯೋಗದ ಎಸ್ಐಆರ್ ಪ್ರಕ್ರಿಯೆ ಹಾಗೂ ಚುನಾವಣಾ ಆಯುಕ್ತರ ನಡುವಿನ ಅಭಿಪ್ರಾಯ ಭೇದದ ವರದಿಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ನಡೆಗಳನ್ನು ಟೀಕಿಸಿದ್ದರು.
ಚುನಾವಣಾ ಆಯೋಗದ ಸ್ಪಷ್ಟನೆ: ಚುನಾವಣಾ ಆಯೋಗವು ಎಸ್ಐಆರ್ ನಿರ್ಧಾರಗಳು ಸರ್ವಾನುಮತದಿಂದ ತಗೆದುಕೊಂಡಿರುವುದು ಮತ್ತು ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟನೆ ನೀಡಿತು.
ರಾಜೀವ್ ಚಂದ್ರಶೇಖರ್ ವಾಗ್ದಾಳಿ: ಆಯೋಗದ ಸ್ಪಷ್ಟನೆಯನ್ನು ಉಲ್ಲೇಖಿಸಿದ ರಾಜೀವ್ ಚಂದ್ರಶೇಖರ್, ರಾಹುಲ್ ಗಾಂಧಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಹಾಗೂ ರಾಜಕೀಯಕ್ಕಾಗಿ ಸುಳ್ಳುಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು “ಫ್ರಾಡ್” ಎಂದು ಕರೆದರು.
ಕಾಂಗ್ರೆಸ್ ನಾಯಕರ ಪ್ರತಿರೋಧ: ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು ರಾಜೀವ್ ಚಂದ್ರಶೇಖರ್ ಅವರ ಹೇಳಿಕೆಯನ್ನು ಖಂಡಿಸಿ, ಇದು ರಾಜಕೀಯ ವಿಮರ್ಶೆಯಲ್ಲ, ಬದಲಿಗೆ ವೈಯಕ್ತಿಕ ನಿಂದನೆ ಎಂದು ಕಿಡಿಕಾರಿದರು.
ಚಂದ್ರಶೇಖರ್ ಬಹಿರಂಗ ಸವಾಲು: ಸತೀಶನ್ ಅವರ ಖಂಡನೆಗೆ ತಿರುಗೇಟು ನೀಡಿದ ರಾಜೀವ್ ಚಂದ್ರಶೇಖರ್, “ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ದೇಶದ್ರೋಹಿ’ ಎಂದು ಕರೆದಿದ್ದಕ್ಕಾಗಿ ಮತ್ತು ಚುನಾವಣಾ ಆಯೋಗಕ್ಕೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸುವಂತೆ ಸತೀಶನ್ ಮಾಡಿದರೆ, ನಾನು ರಾಹುಲ್ ಅವರನ್ನು ‘ಫ್ರಾಡ್’ ಎಂದು ಕರೆಯುವುದನ್ನು ನಿಲ್ಲಿಸುತ್ತೇನೆ” ಎಂದು ಷರತ್ತು ವಿಧಿಸಿದ್ದಾರೆ.
ಈ ರಾಜಕೀಯ ಕೆಸರೆರಚಾಟವು ಕೇರಳ ಮತ್ತು ಕರ್ನಾಟಕ ರಾಜಕೀಯದಲ್ಲಿ ಕಾವು ಹೆಚ್ಚಿಸಿದ್ದು, ಬೆಂಗಳೂರಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ರಾಜೀವ್ ಚಂದ್ರಶೇಖರ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.





Leave a comment