Home ಕ್ರೈಂ ನ್ಯೂಸ್ ರೂ. 45 ಲಕ್ಷ ಮದುವೆ ವೆಚ್ಚ, 10 ತೊಲ ಚಿನ್ನ ನೀಡಿದ್ರೂ ಕಾರಿಗಾಗಿ ಮತ್ತೆ ರೂ. 5 ಲಕ್ಷಕ್ಕೆ ಬೇಡಿಕೆ: 4 ತಿಂಗಳಲ್ಲೇ ನವವಧು ಆತ್ಮಹತ್ಯೆ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ರೂ. 45 ಲಕ್ಷ ಮದುವೆ ವೆಚ್ಚ, 10 ತೊಲ ಚಿನ್ನ ನೀಡಿದ್ರೂ ಕಾರಿಗಾಗಿ ಮತ್ತೆ ರೂ. 5 ಲಕ್ಷಕ್ಕೆ ಬೇಡಿಕೆ: 4 ತಿಂಗಳಲ್ಲೇ ನವವಧು ಆತ್ಮಹತ್ಯೆ

Share
ಚಿನ್ನ
Share

ಪುಣೆ: ವರದಕ್ಷಿಣೆ ಕಿರುಕುಳಕ್ಕೆ ಮತ್ತೊಬ್ಬ ಉನ್ನತ ಶಿಕ್ಷಣ ಪಡೆದ ಯುವತಿ ಬಲಿಯಾಗಿರುವ ಕರುಣಾಜನಕ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಐಟಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 23 ವರ್ಷದ ವೈಷ್ಣವಿ ಪ್ರವೀಣ್ ಜರಾಂಡೆ ಎಂಬ ಯುವತಿ ಮದುವೆಯಾದ ಕೇವಲ ನಾಲ್ಕೇ ತಿಂಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆಯ ಹಿನ್ನೆಲೆ:

ಕಳೆದ ಮೇ 9, 2026 ರಂದು ವೈಷ್ಣವಿ ಅವರ ವಿವಾಹ ಓಂಕಾರ್ ಸಂಜಯ್ ಘಿಸರೆ ಎಂಬಾತನೊಂದಿಗೆ ವಿಜೃಂಭಣೆಯಿಂದ ನೆರವೇರಿತ್ತು. ವೈಷ್ಣವಿ ಕುಟುಂಬದವರು ಮದುವೆಗಾಗಿ ಸುಮಾರು 45 ಲಕ್ಷ ರೂಪಾಯಿ ವೆಚ್ಚ ಮಾಡಿದ್ದು, 10 ತೊಲ ಚಿನ್ನಾಭರಣವನ್ನು ನೀಡಿದ್ದರು. ಮದುವೆಯಾದ ಆರಂಭದಲ್ಲಿ ಕೆಲ ದಿನಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡಿದ ವೈಷ್ಣವಿ, ನಂತರ ಪುಣೆಯ ಹುಂಡ್ರಿಯಲ್ಲಿರುವ (ವಡಾಚಿವಾಡಿ) ಗಂಡನ ಮನೆಗೆ ಮರಳಿ ವರ್ಕ್ ಫ್ರಮ್ ಹೋಮ್ (WFH) ಮಾಡುತ್ತಿದ್ದರು.

ಕಾರಿಗಾಗಿ ರೂ. 5 ಲಕ್ಷ ಹೆಚ್ಚುವರಿ ಬೇಡಿಕೆ:

ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರೂ, ವೈಷ್ಣವಿ ಪತಿ ಹಾಗೂ ಅವರ ಕುಟುಂಬಸ್ಥರು ಹೊಸ ಕಾರು ಖರೀದಿಸಲು ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ತರುವಂತೆ ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದರು ಎಂದು ವೈಷ್ಣವಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಸಾವಿಗೂ ಮುನ್ನ ತಾಯಿಗೆ ಕರೆ:

ಸೆಪ್ಟೆಂಬರ್ 24ರ ರಾತ್ರಿ ವೈಷ್ಣವಿ ತಮ್ಮ ತಾಯಿಗೆ ಕರೆ ಮಾಡಿ, ಗಂಡನ ಮನೆಯಲ್ಲಿ ತಮಗೆ ನೀಡಲಾಗುತ್ತಿರುವ ದೌರ್ಜನ್ಯದ ಬಗ್ಗೆ ಅಳಲ ತೋಡಿಕೊಂಡಿದ್ದರು. ಅದೇ ರಾತ್ರಿ ಸುಮಾರು 11:30 ಕ್ಕೆ ಆಕೆಯ ಪತಿ ಓಂಕಾರ್ ಕೂಡ ವೈಷ್ಣವಿ ಹೆತ್ತವರಿಗೆ ಕರೆ ಮಾಡಿದ್ದ. ಆತಂಕಗೊಂಡ ಪೋಷಕರು ವೈಷ್ಣವಿಯನ್ನು ಸಂಪರ್ಕಿಸಲು ಯತ್ನಿಸಿದಾಗ ಆಕೆ ಸಿಗಲಿಲ್ಲ. ತಕ್ಷಣವೇ ರಾತ್ರೋರಾತ್ರಿ ಪುಣೆಗೆ ಧಾವಿಸಿದ ಹೆತ್ತವರಿಗೆ ವೈಷ್ಣವಿ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ತನಿಖೆ:

ಮೃತರ ತಂದೆ ನೀಡಿದ ದೂರಿನ ಮೇರೆಗೆ ಕಾಳೆಪಡಲ್ ಪೊಲೀಸ್ ಠಾಣೆಯಲ್ಲಿ ಪತಿ ಓಂಕಾರ್ ಸಂಜಯ್ ಘಿಸರೆ, ಮಾವ ಸಂಜಯ್ ಮಹಾದೇವ್ ಘಿಸರೆ ಮತ್ತು ಅತ್ತೆ ರೂಪಾಲಿ ಸಂಜಯ್ ಘಿಸರೆ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *