Home ದಾವಣಗೆರೆ “ಇನ್ನು 1 ತಿಂಗಳಲ್ಲಿ ಸುನೀಲ್ ಕುಮಾರ್ ವಿಪಕ್ಷ ನಾಯಕ, ಸೋಮಣ್ಣ ರಾಜ್ಯಾಧ್ಯಕ್ಷ”, ಬಿಜೆಪಿ ಹೈಕಮಾಂಡ್ ನನ್ನ ಬಳಿ ಹೇಳಿದೆ: ಪ್ರದೀಪ್ ಈಶ್ವರ್ ಸ್ಫೋಟಕ ಹೇಳಿಕೆ!
ದಾವಣಗೆರೆಬೆಂಗಳೂರು

“ಇನ್ನು 1 ತಿಂಗಳಲ್ಲಿ ಸುನೀಲ್ ಕುಮಾರ್ ವಿಪಕ್ಷ ನಾಯಕ, ಸೋಮಣ್ಣ ರಾಜ್ಯಾಧ್ಯಕ್ಷ”, ಬಿಜೆಪಿ ಹೈಕಮಾಂಡ್ ನನ್ನ ಬಳಿ ಹೇಳಿದೆ: ಪ್ರದೀಪ್ ಈಶ್ವರ್ ಸ್ಫೋಟಕ ಹೇಳಿಕೆ!

Share
ಸುನೀಲ್ ಕುಮಾರ್
Share

ದಾವಣಗೆರೆ: ಇನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಬಿಜೆಪಿಯಲ್ಲಿ ದೊಡ್ಡ ಬದಲಾವಣೆಯಾಗಲಿದೆ ಎಂದು ಭವಿಷ್ಯ ನುಡಿದ ಪ್ರದೀಪ್ ಈಶ್ವರ್, “ಮುಂದೆ ಸುನೀಲ್ ಕುಮಾರ್ ರಾಜ್ಯದ ವಿರೋಧ ಪಕ್ಷದ ನಾಯಕರಾಗುತ್ತಾರೆ ಹಾಗೂ ವಿ. ಸೋಮಣ್ಣ ರಾಜ್ಯಾಧ್ಯಕ್ಷರಾಗಲಿದ್ದಾರೆ. ಈ ವಿಷಯವನ್ನು ಖುದ್ದು ಬಿಜೆಪಿಯ ಹೈಕಮಾಂಡ್ ನಾಯಕರೇ ನನ್ನ ಬಳಿ ಹೇಳಿದ್ದಾರೆ” ಎಂದು ಸ್ಫೋಟಕ ಹೇಳಿಕೆ ನೀಡಿದರು.

ಇದೇ ವೇಳೆ ಹಾಲಿ ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿ, “ಅಶೋಕಣ್ಣ ವಿರೋಧ ಪಕ್ಷದ ನಾಯಕರಾಗಲು ನಾಲಾಯಕ್. ಆದರೆ ಅವರ ಇಂಗ್ಲಿಷ್ ಭಾಷೆಗೆ ನಾನು ಫ್ಯಾನ್ ಆಗಿದ್ದೇನೆ” ಎಂದು ವ್ಯಂಗ್ಯವಾಡಿದರು.

ಗ್ಯಾರಂಟಿ ಯೋಜನೆಗಳು ಹಾಗೂ 2028ರ ಮತದಾರರಲ್ಲಿ ಮನವಿ

ರಾಜ್ಯ ಸರ್ಕಾರದ ಉಚಿತ ಬಸ್ ಪ್ರಯಾಣ (ಶಕ್ತಿ ಯೋಜನೆ) ಹಾಗೂ ಪ್ರತಿ ತಿಂಗಳು ನೀಡಲಾಗುವ 2,000 ರೂಪಾಯಿ (ಗೃಹಲಕ್ಷ್ಮಿ ಯೋಜನೆ) ಹಣವನ್ನು ಉಲ್ಲೇಖಿಸಿದ ಅವರು, “ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಎಲ್ಲಾ ಗ್ಯಾರಂಟಿಗಳನ್ನು ತಕ್ಷಣವೇ ನಿಲ್ಲಿಸುತ್ತಾರೆ. ಬಿಜೆಪಿಯ ಕಳ್ಳರನ್ನು ಎಂದಿಗೂ ನಂಬಬೇಡಿ. 2028ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ, ಕನಿಷ್ಠ 150 ಸ್ಥಾನಗಳನ್ನು ಗೆಲ್ಲಿಸಿ” ಎಂದು ಮಹಿಳಾ ಮತದಾರರಲ್ಲಿ ವಿನಂತಿಸಿಕೊಂಡರು.

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಶಾಸಕರು, “ಖಜಾನೆ ಖಾಲಿಯಾಗಿಲ್ಲ. ಶಾಸಕರು ಅನುದಾನ ಕೇಳುವುದು ಒಂದು ಸಹಜವಾದ ಆಡಳಿತಾತ್ಮಕ ಪ್ರಕ್ರಿಯೆ. ಬಿಜೆಪಿ ಶಾಸಕರಿಗೂ 30 ಕೋಟಿ ರೂಪಾಯಿ ನೀಡಿದ್ದೇವೆ” ಎಂದರು.

ಸಿಎಂ ರೇಸ್ ಹಾಗೂ ಮಂತ್ರಿ ಸ್ಥಾನದ ಆಸೆ

ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಸಿಎಂ ಸ್ಥಾನದ ಚರ್ಚೆಗಳ ಕುರಿತು ಮಾತನಾಡುತ್ತಾ, “ನನಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಎರಡು ಕಣ್ಣುಗಳಿದ್ದಂತೆ. ನಾನು ಇಬ್ಬರನ್ನೂ ಬಿಟ್ಟುಕೊಡುವುದಿಲ್ಲ, ಇಬ್ಬರೂ ಬೇಕು. ಈಗ ಯಾರಾದರೂ ಸಿಎಂ ಕ್ಲೈಮ್ ಮಾಡಿಕೊಳ್ಳಲಿ, ನಾನು ಕೂಡ 2028ಕ್ಕೆ ಸಿಎಂ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತೇನೆ, ಅದನ್ನು ಮಾಡಲು ಸಾಧ್ಯವೇ? ಕನಿಷ್ಠ ನನಗೊಂದು ಮಂತ್ರಿ ಸ್ಥಾನವಾದರೂ ನೀಡಲಿ” ಎಂದು ಹಾಸ್ಯದ ಧಾಟಿಯಲ್ಲಿ ತಮ್ಮ ಇಚ್ಛೆಯನ್ನು ಹೊರಹಾಕಿದರು.

ಪ್ರತಾಪ್ ಸಿಂಹ ಹಾಗೂ ನಾಯಕರ ವಿರುದ್ಧ ತಿವಿತ

ವಿಜಯೇಂದ್ರ ಹಾಗೂ ಯತ್ನಾಳ್ ಅವರನ್ನು ಉಲ್ಲೇಖಿಸಿದ ಅವರು, ಹೆಸರು ಹೇಳದೆ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ “ಅದ್ಯಾವುದೋ ಮಾಜಿ ಎಂಪಿ ಹೆಸರು ಮರೆತುಹೋಗಿದೆ, ಆ ವ್ಯಕ್ತಿ ನನ್ನ ವಿರುದ್ಧ ಎರಡು ಕೇಸ್ ದಾಖಲು ಮಾಡಿದ್ದಾರೆ” ಎಂದು ಚುಚ್ಚಿದರು.

ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದ ಪ್ರದೀಪ್ ಈಶ್ವರ್, “ಇದು ನಾನು ಹೇಳುತ್ತಿರುವುದಲ್ಲ, ಚುನಾವಣಾ ಕಾಯ್ದೆಯ ಬಾಡಿಯವರೇ ಹೇಳುತ್ತಿರುವುದು. ಜ್ಞಾನೇಶ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಮುಂದೊಂದು ದಿನ ಅವರು ರಾಜ್ಯಪಾಲರು (ಗವರ್ನರ್) ಅಥವಾ ಉಪರಾಷ್ಟ್ರಪತಿಯಾದರೂ (ವೈಸ್ ಪ್ರೆಸಿಡೆಂಟ್) ಅಚ್ಚರಿಯಿಲ್ಲ” ಎಂದರು.

ಚಲವಾದಿ ನಾರಾಯಣಸ್ವಾಮಿಗೆ ತಿರುಗೇಟು

ರಾಹುಲ್ ಗಾಂಧಿಯವರಿಗೆ ಮದುವೆ ಮಾಡಿಸಿದರೆ ಅವರ ಹುಚ್ಚು ಕಡಿಮೆಯಾಗುತ್ತದೆ ಎಂಬ ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಈಶ್ವರ್, “ಚಲವಾದಿ ನಾರಾಯಣಸ್ವಾಮಿಯವರಿಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ, ಆದರೂ ಅವರ ಹುಚ್ಚು ಇನ್ನು ಕಡಿಮೆಯಾಗಿದೆಯೇ?” ಎಂದು ಪ್ರಶ್ನಿಸಿದರು.

ಮುಂದುವರಿದು, “ಚಲವಾದಿ ನಾರಾಯಣಸ್ವಾಮಿ ಎಂದರೆ ನನಗೆ ತುಂಬಾ ಇಷ್ಟ, ಏಕೆಂದರೆ ಅವರು ಯಾವುದೇ ವಿಚಾರಗಳನ್ನು ಓದಿಕೊಳ್ಳದೆ ಪ್ರೆಸ್‌ಮೀಟ್ ಮಾಡುತ್ತಾರೆ. 30 ವರ್ಷಗಳ ಕಾಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಾಕೆಟ್ ಹಿಡಿದು ಹೊಗಳಿ ಕೆಲಸ ಮಾಡಿಕೊಂಡಿದ್ದರು. ಈಗ ಬಿಜೆಪಿಗೆ ಹೋಗಿ ಪ್ರಿಯಾಂಕ್ ಖರ್ಗೆ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.

Share

Leave a comment

Leave a Reply

Your email address will not be published. Required fields are marked *