ಗುಣ: ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸ್ಥಳೀಯ ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ದೀರ್ಘಕಾಲದಿಂದ ಬಾಕಿಯಿರುವ ರಸ್ತೆ ನಿರ್ಮಾಣ ಕಾರ್ಯವನ್ನು ತಕ್ಷಣವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ಸಚಿವರ ವಾಹನಗಳನ್ನುತಡೆದು ಪ್ರತಿಭಟನೆ ನಡೆಸಿದರು.
ಘಟನೆಯ ವಿವರ:
ಪ್ರತಿಭಟನಾಕಾರರು “ರಸ್ತೆ ಇಲ್ಲದಿದ್ದರೆ ಮತವಿಲ್ಲ” ಎಂಬ ಫಲಕಗಳನ್ನು ಹಿಡಿದು ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಓರ್ವ ಸ್ಥಳೀಯ ನಿವಾಸಿ ಸಿಂಧಿಯಾ ಅವರ ಬಳಿ ಮಾತನಾಡಿ, “ಈ ಬಾರಿ ರಸ್ತೆ ನಿರ್ಮಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ನಮ್ಮ ಇಡೀ ಕಾಲೋನಿಯ ಜನ ಯಾರೂ ನಿಮಗೆ ಮತ ಹಾಕುವುದಿಲ್ಲ” ಎಂದು ಎಚ್ಚರಿಕೆ ನೀಡಿದನು.
ಇದರಿಂದ ಅಸಮಾಧಾನಗೊಂಡ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗರಂ ಆಗಿ, “ನನ್ನ ಬಳಿ ಈ ರೀತಿಯ ಭಾಷೆಯನ್ನು ಬಳಸಬೇಡಿ. ನೀವು ವಿನಂತಿ (Request) ಮಾಡಿಕೊಳ್ಳಿ, ಕೆಲಸ ಮಾಡಿಸಿಕೊಡುವುದು ನನ್ನ ಜವಾಬ್ದಾರಿ” ಎಂದು ಖಾರವಾಗಿ ಉತ್ತರಿಸಿದರು. ಈ ವಾಕ್ಸಮರದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ.
ತಕ್ಷಣದ ಪರಿಹಾರ:
ವೀಡಿಯೋ ವೈರಲ್ ಆದ ಬೆನ್ನಲ್ಲೇ, ಘಟನೆ ನಡೆದು ಅರ್ಧ ಗಂಟೆಯೊಳಗೆ ಸಿಂಧಿಯಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರಸ್ತೆ ನಿರ್ಮಾಣಕ್ಕೆ ₹3 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡುವುದಾಗಿ ಘೋಷಿಸಿದರು. ಈ ಹಣವನ್ನು ಗುಣಾ ಶಾಸಕ ಪನ್ನಾಲಾಲ್ ಶ್ಯಾಕ್ಯ ಅವರ ಶಾಸಕರ ನಿಧಿಯಿಂದ ಒದಗಿಸಲಾಗುತ್ತಿದ್ದು, ಮಳೆಗಾಲ ಮುಗಿದ ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.





Leave a comment