ಮುಂಬೈ: ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಬಾಂಬೆಯ ದ್ವಿತೀಯ ವರ್ಷದ ಬಿ.ಟೆಕ್ ವಿದ್ಯಾರ್ಥಿಯೊಬ್ಬ ಶುಕ್ರವಾರ ಸಂಜೆ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನನ್ನು ಎನರ್ಜಿ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಾಹಿಲ್ ವಾಕೋಡೆ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಿಗ್ಗೆ ನಡೆದ ಮಧ್ಯಂತರ ಪರೀಕ್ಷೆಯ ವೇಳೆ ವಿದ್ಯಾರ್ಥಿ ಮೊಬೈಲ್ ಫೋನ್ ಬಳಸಿ, ಪ್ರಶ್ನೆಪತ್ರಿಕೆಯನ್ನು ChatGPTಗೆ ಅಪ್‌ಲೋಡ್ ಮಾಡುವ ಮೂಲಕ ಉತ್ತರಗಳನ್ನು ಹುಡುಕುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಈ ಘಟನೆಯ ನಂತರ ಕೋರ್ಸ್ ಬೋಧಕರು ಮತ್ತು ವಿಭಾಗದ ಮುಖ್ಯಸ್ಥರು (HOD) ವಿದ್ಯಾರ್ಥಿಯೊಂದಿಗೆ ಸಮಾಲೋಚನೆ ನಡೆಸಿ, ಯಾವುದೇ ಶಿಸ್ತುಕ್ರಮ ಜರುಗಿಸುವುದಿಲ್ಲ ಮತ್ತು ಶೈಕ್ಷಣಿಕ ಭವಿಷ್ಯದ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದು ಸಂಸ್ಥೆ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ, ಸಂಜೆಯ ವೇಳೆಗೆ ವಿದ್ಯಾರ್ಥಿ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ಏಳು ತಿಂಗಳಲ್ಲಿ ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ವರದಿಯಾದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ ಹಾಗೂ ಆರೋಪ:
ಸುದ್ದಿ ಹೊರಬೀಳುತ್ತಿದ್ದಂತೆ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ. ಸಂಸ್ಥೆಯು ಘಟನೆಯ ಸಂಪೂರ್ಣ ಸತ್ಯವನ್ನು ಮರೆಮಾಚುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ವಿದ್ಯಾರ್ಥಿಗೆ ಒಂದು ವರ್ಷದ ಅಮಾನತು ಬೆದರಿಕೆ ಹಾಕಲಾಗಿತ್ತು, ಇದರಿಂದಾಗಿ ಹಾಸ್ಟೆಲ್ ಖಾಲಿ ಮಾಡಬೇಕಾಗಬಹುದು ಮತ್ತು ಕೋರ್ಸ್ ಅವಧಿ ವಿಸ್ತರಣೆಯಾಗಬಹುದು ಎಂಬ ಭಯದಿಂದ ವಿದ್ಯಾರ್ಥಿ ಈ ನಿರ್ಧಾರ ತಳೆದಿದ್ದಾನೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಪರಿಸ್ಥಿತಿಯನ್ನು ಹತೋಟಿಗೆ ತರಲು ಪಾವೈ ಪೋಲಿಸರು ಭಾರಿ ಬಂದೋಬಸ್ತ್ ಕೈಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.





Leave a comment