ನವದೆಹಲಿ: ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ನಾಯಕಿಯ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಲಪಂಥೀಯ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್ ಗುರುವಾರ ತಡರಾತ್ರಿ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ದೆಹಲಿಯ ಸಷನ್ಸ್ ನ್ಯಾಯಾಲಯವು ಅವರಿಗೆ 3 ವಾರಗಳ ಕಾಲಾವಧಿಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜೈಲಿನ ಮುಖ್ಯ ದ್ವಾರದಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಭಾರದ್ವಾಜ್ ದೂಡಿಕೊಂಡು ಓಡಿಹೋಗಿ ಕಾರು ಹತ್ತಿದರು. ಅವರು ತೆರಳಿದ ಕಾರಿನ ನಂಬರ್ ಪ್ಲೇಟ್ ಅನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಪೋಲಿಸರ ಸಮ್ಮುಖದಲ್ಲೇ ಈ ರೀತಿ ನಿಯಮ ಉಲ್ಲಂಘಿಸಿ ಕಾರಿನಲ್ಲಿ ಕರೆದೊಯ್ಯಲಾಗಿರುವುದು ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. “ಆರೋಪಿ ಜೈಲಿನಿಂದ ಓಡಿಹೋಗುತ್ತಿದ್ದಾನೆಯೇ?” ಎಂದು ಹಲವರು ಎಕ್ಸ್ (ಟ್ವಿಟರ್) ಹಾಗೂ ಫೇಸ್ಬುಕ್ನಲ್ಲಿ ಪ್ರಶ್ನಿಸಿದ್ದಾರೆ.
ಕೋರ್ಟ್ ವಿಧಿಸಿದ ಕಠಿಣ ಷರತ್ತುಗಳು:
ವಿಚಾರಣೆ ನಡೆಸಿದ ಪಟಿಯಾಲ ಹೌಸ್ ಕೋರ್ಟ್ ಅಡಿಷನಲ್ ಸೆಷನ್ಸ್ ಜಡ್ಜ್ ಅವರು ಜಾಮೀನು ಮಂಜೂರು ಮಾಡುತ್ತಾ, “ಜಾಮೀನು ಎಂಬುದು ನ್ಯಾಯಾಲಯದ ನಂಬಿಕೆಯ ಸಂಕೇತವೇ ಹೊರತು ಅದು ಪ್ರದರ್ಶಿಸುವ ಟ್ರೋಫಿಯಲ್ಲ” ಎಂದು ಎಚ್ಚರಿಸಿದ್ದಾರೆ.
ಯಾವುದೇ ರೀತಿಯ ಸೋಷಿಯಲ್ ಮೀಡಿಯಾ ಅಥವಾ ಪ್ರಿಂಟ್/ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಕರಣದ ಬಗ್ಗೆ ಮಾತನಾಡುವಂತಿಲ್ಲ.
ದೂರುದಾರರು, ಅವರ ಮಗಳು ಅಥವಾ ಯಾವುದೇ ಸಾಕ್ಷಿಗಳನ್ನು ಸಂಪರ್ಕಿಸಲು ಯತ್ನಿಸಬಾರದು.
ಈ 3 ವಾರಗಳ ಅವಧಿಯಲ್ಲಿ ಅವರ ನಡವಳಿಕೆಯನ್ನು ಗಮನಿಸಿ, ಅಕ್ಟೋಬರ್ 6 ರಂದು ಅವರ ಖಾಯಂ ಜಾಮೀನು ಅರ್ಜಿಯ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೋರ್ಟ್ ತಿಳಿಸಿದೆ.
ಕಳೆದ ಜೂನ್ 23 ರಂದು ಜಂತರ್ ಮಂತರ್ ಬಳಿ ನಡೆದ ಜಗಳದಲ್ಲಿ ತಾನು ಸಂತ್ರಸ್ತನ ತಲೆಬುರುಡೆ ಒಡೆದಿದ್ದಾಗಿ ಭಾರದ್ವಾಜ್ ಸಂದರ್ಶನವೊಂದರಲ್ಲಿ ಹೇಳಿಕೊಂಡ ನಂತರ ಸೆಪ್ಟೆಂಬರ್ 4 ರಂದು ಅವರನ್ನು ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಬಂಧಿಸಲಾಗಿತ್ತು.





Leave a comment