ಶಿವಮೊಗ್ಗ/ದಾವಣಗೆರೆ: ಭದ್ರಾ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅಭಾವ ನೀಗಿಸಲು ಇಂದಿನಿಂದ (ಸೆಪ್ಟೆಂಬರ್ 17) 15 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧಿಕೃತ ಆದೇಶ ಹೊರಡಿಸಿದೆ.
ಶಿವಮೊಗ್ಗ, ಭದ್ರಾವತಿ, ದಾವಣಗೆರೆ, ಶಾಂತಿಸಾಗರ ಹಾಗೂ ಮಲೆಬೆನ್ನೂರು ಭಾಗಗಳಲ್ಲಿ ನೀರಿಗಾಗಿ ರೈತರು ಮತ್ತು ಸಾರ್ವಜನಿಕರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು. ಈ ಕುರಿತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಜಲಸಂಪನ್ಮೂಲ ಸಚಿವರು ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಮಧು ಬಂಗಾರಪ್ಪ ಹಾಗೂ ಉನ್ನತಾಧಿಕಾರಿಗಳು ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ಆದೇಶದ ಪ್ರಮುಖ ಮುಖ್ಯಾಂಶಗಳು:
ಸಮಯಾವಧಿ: ಸೆಪ್ಟೆಂಬರ್ 17ರ ಮಧ್ಯರಾತ್ರಿ 12.00 ಗಂಟೆಯಿಂದ ಅಕ್ಟೋಬರ್ 02, 2026ರವರೆಗೆ ಒಟ್ಟು 15 ದಿನಗಳ ಕಾಲ ನೀರು ಹರಿಸಲಾಗುತ್ತದೆ.
ಉದ್ದೇಶ: ಜನರ ಹಾಗೂ ಜಾನುವಾರುಗಳ ಕುಡಿಯುವ ನೀರು, ಅಂತರ್ಜಲ ವೃದ್ಧಿ ಮತ್ತು ಕೆರೆಗಳನ್ನು ತುಂಬಿಸಲು ಆದ್ಯತೆ ನೀಡಲಾಗಿದೆ.
ಬೆಳೆಗಳಿಗೆ ಬಳಸುವಂತಿಲ್ಲ: ಈ ನೀರನ್ನು ಕೇವಲ ಕುಡಿಯುವ ಹಾಗೂ ಅಗತ್ಯ ಬಳಕೆಗೆ ಮಾತ್ರ ಮೀಸಲಿಡಲಾಗಿದ್ದು, ಬೆಳೆಗಳಿಗೆ ಅಥವಾ ನೀರಾವರಿಗೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅಕ್ರಮ ತಡೆ: ಅನಧಿಕೃತವಾಗಿ ನೀರು ಎತ್ತುವುದು, ಈಜಾಡುವುದು, ದನಕರಗಳನ್ನು ತೊಳೆಯುವುದು ಹಾಗೂ ಬಟ್ಟೆ ಒಳೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮುನ್ನೆಚ್ಚರಿಕೆ: ಡಿಸೆಂಬರ್ 2026ರವರೆಗೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಸದ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ನೀರಾವರಿ ಇಲಾಖೆಯ ನಿಯಮಾವಳಿಗಳಿಗೆ ರೈತರು ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕೆಂದು ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಕೋರಿದ್ದಾರೆ.





Leave a comment