ವಾಷಿಂಗ್ಟನ್ / ಹೈದರಾಬಾದ್: ಉನ್ನತ ಭವಿಷ್ಯದ ಕನಸು ಹೊತ್ತು ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್ ಮೂಲದ ಯುವಕನೊಬ್ಬ, ಮದುವೆಯಾದ ಕೇವಲ 17 ದಿನಗಳಲ್ಲೇ ನಿದ್ರೆಯಲ್ಲೇ ಶಂಕಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದ ಮಾಸಚೂಸೆಟ್ಸ್‌ನಲ್ಲಿ ನಡೆದಿದೆ.
ಹೈದರಾಬಾದ್‌ನ ಸಂತೋಷ್‌ನಗರ ನಿವಾಸಿ ಮೊಹಮ್ಮದ್ ಜಾಬೀರ್ ಹುಸೇನ್ (28) ಮೃತ ದುರದೃಷ್ಟಕರ ಯುವಕ. ಹುಸೇನ್ ಮಾಸಚೂಸೆಟ್ಸ್‌ನ ಲೋವೆಲ್ ನಗರದಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಘಟನೆಯ ವಿವರ:
ಮೊಹಮ್ಮದ್ ಜಾಬೀರ್ ಹುಸೇನ್ 2021 ರಲ್ಲಿ ಉನ್ನತ ಶಿಕ್ಷಣಕ್ಕಾಗಿ (ಎಂ.ಎಸ್) ಅಮೆರಿಕಕ್ಕೆ ತೆರಳಿದ್ದರು. ಇತ್ತೀಚೆಗಷ್ಟೇ ಅಂದರೆ ಆಗಸ್ಟ್ 28 ರಂದು ಟೆಕ್ಸಾಸ್‌ನಲ್ಲಿ ಇವರ ವಿವಾಹ ಸಂಭ್ರಮದಿಂದ ನೆರವೇರಿತ್ತು. ವಿವಾಹದ ನಂತರ ಕೆಲಸದ ನಿಮಿತ್ತ ಮಾಸಚೂಸೆಟ್ಸ್‌ಗೆ ಮರಳಿದ್ದ ಹುಸೇನ್, ಸೆಪ್ಟೆಂಬರ್ 14 ರಂದು ಬೆಳಿಗ್ಗೆ ಭಾರತದಲ್ಲಿದ್ದ ತಮ್ಮ ಕುಟುಂಬದೊಂದಿಗೆ ಸಾಮಾನ್ಯವಾಗಿಯೇ ಮಾತನಾಡಿದ್ದರು.
ಆದರೆ, ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ರೂಮ್‌ಮೇಟ್‌ನಿಂದ ಕುಟುಂಬಕ್ಕೆ ಕರೆ ಬಂದಿದ್ದು, ಹುಸೇನ್ ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ. ಸಾವು ಹೇಗೆ ಸಂಭವಿಸಿತು ಎಂಬ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಸ್ತುತ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕುಟುಂಬಸ್ಥರು ಕಾಯುತ್ತಿದ್ದಾರೆ.
ಪಾರ್ಥಿವ ಶರೀರ ತರಲು ಸರ್ಕಾರದ ನೆರವಿಗೆ ಮನವಿ:
ಮೃತ ಹುಸೇನ್ ಕುಟುಂಬವು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ್ದರಿಂದ, ಮೃತದೇಹವನ್ನು ಭಾರತಕ್ಕೆ ತರಲು ಅಪಾರ ವೆಚ್ಚವಾಗಲಿದೆ. ಹೀಗಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ತಕ್ಷಣ ಮಧ್ಯಪ್ರವೇಶಿಸಿ, ಭಾರತೀಯ ರಾಯಭಾರ ಕಚೇರಿಯ ಮೂಲಕ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ತರಲು ಸಹಾಯ ಮಾಡಬೇಕೆಂದು ಮೃತನ ತಂದೆ ಮತ್ತು ಮಜ್ಲಿಸ್ ಬಚಾವೋ ತೆಹ್ರೀಕ್ (MBT) ವಕ್ತಾರ ಅಮ್ಜದ್ ಉಲ್ಲಾ ಖಾನ್ ಮನವಿ ಮಾಡಿದ್ದಾರೆ.





Leave a comment