ಗೌಹಾಟಿ: ಅಸ್ಸಾಂ ರಾಜ್ಯದಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಭದ್ರತಾ ಪಡೆಗಳು ಭಾರಿ ಸಮರ ಸಾರಿದ್ದು, ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆಯಾಡಿವೆ. ಅಸ್ಸಾಂನ ಹೈಲಾಕಂಡಿ ಜಿಲ್ಲೆಯಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು ₹327 ಕೋಟಿ ಮೌಲ್ಯದ 109.2 ಕೆಜಿ ‘ಯಾಬಾ’ (Yaba) ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಿಜೋರಾಂ ಗಡಿಭಾಗದಲ್ಲಿ ಭಾರಿ ಕಾರ್ಯಾಚರಣೆ
ಖಚಿತ ಮಾಹಿತಿ ಆಧರಿಸಿ ಅಸ್ಸಾಂ ರೈಫಲ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ ಜಂಟಿಯಾಗಿ ಹೈಲಾಕಂಡಿ ಜಿಲ್ಲೆಯ ರಾಮನಾಥಪುರ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಿವೆ. ಮಿಜೋರಾಂ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಒಟ್ಟು 546 ಪ್ಯಾಕೆಟ್‌ಗಳಲ್ಲಿದ್ದ 109.2 ಕೆಜಿ ತೂಕದ ಯಾಬಾ ಮಾತ್ರೆಗಳನ್ನು ಸಾಗಿಸಲಾಗುತ್ತಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಶಂಕಿತ ಆರೋಪಿಯನ್ನು ಬಂಧಿಸಲಾಗಿದ್ದು, ಮಾದಕ ದ್ರವ್ಯ ಸಾಗಾಣಿಕೆಗೆ ಬಳಸುತ್ತಿದ್ದ ಎರಡು ಟ್ರಕ್‌ಗಳು, ಮೊಬೈಲ್ ಫೋನ್, ಆಧಾರ್ ಕಾರ್ಡ್ ಹಾಗೂ ಚಾಲನಾ ಪರವಾನಗಿಯನ್ನು ಜಪ್ತಿ ಮಾಡಲಾಗಿದೆ.
ಏನಿದು ಯಾಬಾ ಮಾತ್ರೆ?
ಥಾಯ್ ಭಾಷೆಯಲ್ಲಿ ‘ಯಾಬಾ’ ಎಂದರೆ ‘ಹುಚ್ಚು ಔಷಧ’ (Crazy Medicine) ಎಂದರ್ಥ. ಇದು ಮೆಥಾಂಫೆಟಮೈನ್ (Methamphetamine) ಮತ್ತು ಕೆಫೀನ್ ಮಿಶ್ರಣದಿಂದ ತಯಾರಾಗುವ ಅತ್ಯಂತ ಅಪಾಯಕಾರಿ ಮಾದಕ ವಸ್ತುವಾಗಿದ್ದು, ಭಾರತದಲ್ಲಿ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಗಡಿಭಾಗವೇ ಸಾಗಾಣಿಕೆ ಹೆದ್ದಾರಿ:
ಮ್ಯಾನ್ಮಾರ್‌ನಿಂದ ಮಿಜೋರಾಂ ಮತ್ತು ಮಣಿಪುರ ಗಡಿಗಳ ಮೂಲಕ ಭಾರತದೊಳಗೆ ಈ ಅಪಾಯಕಾರಿ ಮಾದಕ ವಸ್ತುಗಳನ್ನು ಕದ್ದುಮುಚ್ಚಿ ತರಲಾಗುತ್ತದೆ. ನಂತರ ಅಸ್ಸಾಂ ಮಾರ್ಗವಾಗಿ ದೇಶದ ಇತರೆ ರಾಜ್ಯಗಳಿಗೆ ಸರಬರಾಜು ಮಾಡುವ ಬೃಹತ್ ಜಾಲ ಸಕ್ರಿಯವಾಗಿದೆ. ಈ ಇತ್ತೀಚಿನ ಜಪ್ತಿಯು ಅಂತಾರಾಜ್ಯ ಮಾದಕ ದ್ರವ್ಯ ಜಾಲಕ್ಕೆ ಭಾರಿ ಪೆಟ್ಟು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಆಗಸ್ಟ್ 27 ರಂದು ಕಾಚಾರ್ ಜಿಲ್ಲೆಯಲ್ಲಿ ₹168 ಕೋಟಿ ಮೌಲ್ಯದ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಹೈಲಾಕಂಡಿಯಲ್ಲಿ ಸಿಕ್ಕಿರುವ ಸರಕು ರಾಜ್ಯದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಡ್ರಗ್ಸ್ ಜಪ್ತಿಯಾಗಿದೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಬಂಧಿತ ವ್ಯಕ್ತಿ ಹಾಗೂ ಜಪ್ತಿ ಮಾಡಿದ ವಸ್ತುಗಳನ್ನು ಸಿಲ್ಚಾರ್‌ನ ಡಿಆರ್‌ಐ ಘಟಕಕ್ಕೆ ಒಪ್ಪಿಸಲಾಗಿದೆ.





Leave a comment