ಬೆಂಗಳೂರು: “ದೇಶವನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ” ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸಾಧಿಸಿರುವ ಅಭಿವೃದ್ಧಿಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ಆಡಳಿತದ ಕಪ್ಪು ಪುಟಗಳನ್ನು ತಿರುವಿ ನೋಡುವಂತೆ ಸವಾಲು ಹಾಕಿದ್ದಾರೆ.
“ಭಾರತವನ್ನು ಯಾವುದರಿಂದ ರಕ್ಷಿಸಬೇಕು?” ಎಂದು ಪ್ರಶ್ನಿಸಿರುವ ವಿಜಯೇಂದ್ರ, ಮೋದಿ ಆಡಳಿತದಲ್ಲಿ ದೇಶವು ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ಉದಾಹರಣೆಗಳನ್ನು ನೀಡಿದ್ದಾರೆ:
ಆರ್ಥಿಕತೆ ಹಾಗೂ ಮೂಲಸೌಕರ್ಯ: ಭಾರತವು ವಿಶ್ವದ 4ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಹೆದ್ದಾರಿ ಜಾಲವು 2014ರಲ್ಲಿ 91,287 ಕಿ.ಮೀ ಇದ್ದದ್ದು, ಇಂದು 1,46,572 ಕಿ.ಮೀ ಗೆ ವಿಸ್ತರಿಸಿದೆ. ಕಾರ್ಯಾಚರಿಸುವ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 164 ಕ್ಕೆ ಏರಿಕೆಯಾಗಿದೆ.
ಆರ್ಥಿಕ ಸೇರ್ಪಡೆ ಹಾಗೂ ಯುಪಿಐ: 59 ಕೋಟಿಗೂ ಹೆಚ್ಚು ಜನಧನ್ ಖಾತೆಗಳನ್ನು ತೆರೆಯುವ ಮೂಲಕ ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ತಲುಪಿಸಲಾಗಿದೆ. 2025-26ನೇ ಹಣಕಾಸು ವರ್ಷದಲ್ಲಿ ₹314 ಲಕ್ಷ ಕೋಟಿ ಮೌಲ್ಯದ 2,41,62 ಕೋಟಿಗೂ ಹೆಚ್ಚು ಯುಪಿಐ (UPI) ವಹಿವಾಟುಗಳು ನಡೆದಿವೆ.
ಕಾಂಗ್ರೆಸ್ ಇತಿಹಾಸವನ್ನು ನೆನಪಿಸಿದ ವಿಜಯೇಂದ್ರ, “ಯುವಜನತೆ ಕಾಂಗ್ರೆಸ್ ಇತಿಹಾಸವನ್ನು ಓದಬೇಕು. 1975-77ರ ತುರ್ತು ಪರಿಸ್ಥಿತಿ, ಪತ್ರಿಕಾ ಸ್ವಾತಂತ್ರ್ಯ ಹರಣ, ಭೋಪಾಲ್ ಅನಿಲ ದುರಂತದ ರೂvari ವಾರನ್ ಆಂಡರ್ಸನ್ ಪರಾರಿ, ಬೋಫೋರ್ಸ್ ಹಗರಣ, ಕಲ್ಲಿದ್ದಲು ಹಾಗೂ ಕಾಮನ್ವೆಲ್ತ್ ಹಗರಣಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬೇಕು” ಎಂದರು.
ತಮ್ಮ ಪೀಠವನ್ನು ಉಳಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದ ಅವರು, 2014, 2019 ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ದೇಶದ ಜನತೆ ಈಗಾಗಲೇ ತಮ್ಮ ತೀರ್ಪನ್ನು ನೀಡಿದ್ದಾರೆ. ಮುಂಬರುವ 2028ರ ಕರ್ನಾಟಕ ವಿಧಾನಸಭೆ ಚುನಾವಣೆ ಹಾಗೂ 2029ರ ಲೋಕಸಭಾ ಚುನಾವಣೆಯಲ್ಲಿಯೂ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.





Leave a comment