ಬೆಂಗಳೂರು: ನಮ್ಮ ರಾಜ್ಯದಲ್ಲಿ ಕೇವಲ ಗ್ಯಾರಂಟಿ ಯೋಜನೆಗಳಿಂದ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಅದಕ್ಕೂ ಮುನ್ನ ರಾಜ್ಯದಲ್ಲಿ ನೆಮ್ಮದಿ ಶಾಂತಿ ನೆಲಸಲು ನಮಗೆ ಅಧಿಕಾರ ನೀಡಿ ಎಂದು ಕೇಳಿದ್ದೆವು. ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ವಾಗ್ದಾನ ನೀಡಿದೆವು. ಅಂಧಭಕ್ತರು, ಸೆಗಣಿ ಭಕ್ತರು ಕೋಮುದ್ವೇಷ ಹರಡುತ್ತಿರುವುದು ನಿಲ್ಲಿಸಿದ್ದು, ಇದು ನಮ್ಮ ದೊಡ್ಡ ಸಾಧನೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆದಿದ್ದೇವೆ. ಸುಂದರವಾದ, ಸಮೃದ್ಧವಾದ ರಾಜ್ಯ ನಮ್ಮದು. ಇದನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಮೇಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಐತಿಹಾಸಿಕ ಭಾರತ್ ಜೋಡೋ ಯಾತ್ರೆಯ ಐದನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಷಗುರು ಮೋದಿ, ತಡಿಪಾರ್ ಅಮಿತ್ ಶಾ ಅವರು ಈಗಲೂ ದ್ವೇಷ ಹರಡುವುದನ್ನು ನಿಲ್ಲಿಸುತ್ತಿಲ್ಲ. ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ 1.40 ಕೋಟಿ ಮಕ್ಕಳ ಭವಿಷ್ಯ ಹಾಳು ಮಾಡಲು ಮುಂದಾಗಿದ್ದರು. ಈ ವಿಚಾರವಾಗಿ ಯುವ ಕಾಂಗ್ರೆಸ್ ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಗಟ್ಟಿಯಾದ ಹೋರಾಟ ಮಾಡಬೇಕು. ಜೆನ್ ಜಿ ವಿದ್ಯಾರ್ಥಿಗಳು ಮೋದಿ ಹಾಗೂ ಅಮಿತ್ ಶಾ ಅವರು ಮಂಡಿಯೂರುವಂತೆ ಮಾಡಿದರು. 56 ಇಂಚಿನ ಎದೆ ಇದೆ ಎಂದು ಹೇಳಿಕೊಳ್ಳುವ ನರ ಹೇಡಿ, ಸುಳ್ಳಿನ ಸರದಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಸಂದನದಲ್ಲಿ 240 ಜನರನ್ನು ಎದುರಿಸಲಾಗಲಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಹೇಳಿಕೊಟ್ಟ ಶಾಂತಿ, ಸಹಬಾಳ್ವೆ ಸಂದೇಶವನ್ನು ನಮ್ಮ ಪ್ರದೇಶದಲ್ಲಿ ಕಾಪಾಡಿಕೊಂಡರೆ ನಾವು ಅವರಿಗೆ ದೊಡ್ಡ ಕೊಡುಗೆ ಕೊಟ್ಟಂತೆ. ರಾಜಕೀಯದಲ್ಲಿ ಅಧಿಕಾರ ಯಾಕೆ ಬೇಕು ಎಂದರೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕಣ್ಣಿರು ಒರೆಸಲು ಸರ್ಕಾರ ಇರಬೇಕು ಎಂದು ಮಹಾತ್ಮಾ ಗಾಂಧಿ ಅವರು ಸಂದೇಶ ನೀಡಿದ್ದಾರೆ. ರಾಜಕಾರಣಕ್ಕೆ ಬರಬೇಕಾದರೆ ಯೋಚನೆ ಮಾಡಿ ಬನ್ನಿ, ಜೀವನ ಮಾಡಲು ರಾಜಕೀಯಕ್ಕೆ ಬರಬೇಡಿ, ಜನರ ಜೀವನ ಬದಲಿಸಲು ರಾಜಕೀಯಕ್ಕೆ ಬನ್ನಿ ಎಂದು ಅಂಬೇಡ್ಕರ್ ಅವರು ಹೇಳುತ್ತಾರೆ. ಅದನ್ನು ಪಾಲಿಸೋಣ ಎಂದು ಹೇಳಿದರು.





Leave a comment