ದಾವಣಗೆರೆ: ನಗರದ ಜನಸಂದಣಿಯ ಬಿ.ಡಿ. ಲೇಔಟ್ನಲ್ಲಿ ಕ್ಷುಲ್ಲಕ ಕಾರಣ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.
ಕೈಯಲ್ಲಿ ತಲ್ವಾರ್, ದೊಣ್ಣೆ ಹಾಗೂ ಮಾರಕಾಸ್ತ್ರಗಳನ್ನು ಹಿಡಿದು ಎರಡು ಗುಂಪುಗಳು ನಡುರಸ್ತೆಯಲ್ಲೇ ಪರಸ್ಪರ ಬಡಿದಾಡಿಕೊಂಡಿವೆ. ಈ ಘಟನೆಯಲ್ಲಿ ಇರ್ಫಾನ್, ಜುನೈದ್, ಮೈನು ಸೇರಿದಂತೆ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ರಕ್ತಸಿಕ್ತ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಮಾರು 20 ಕ್ಕೂ ಹೆಚ್ಚು ಯುವಕರಿದ್ದ ಗುಂಪು ಮೊಹಮ್ಮದ್ ದಾಸ್ ನೇತೃತ್ವದಲ್ಲಿ ಮತ್ತೊಂದು ಗುಂಪಿನ ಮೇಲೆ ಮನಬಂದಂತೆ ಹಲ್ಲೆ ನಡೆಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ದಿನದ ನಿತ್ಯದ ವ್ಯವಹಾರ ಹಾಗೂ ಜನಸಂಚಾರವಿರುವ ಪ್ರದೇಶದಲ್ಲೇ ಈ ರೀತಿಯ ಗೂಂಡಾಗಿರಿ ನಡೆದಿರುವುದು ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.
ಈ ಘಟನೆ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕ ಶಾಂತಿಭಂಗ ಉಂಟುಮಾಡಿದ ಮತ್ತು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ.





Leave a comment