SUDDIKSHANA KANNADA NEWS/ DAVANAGERE/ DATE:23-02-2025
ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಬಿ. ಎಸ್. ಯಡಿಯೂರಪ್ಪ ವಿರುದ್ಧ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿದರೆ ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ಏಕವಚನದಲ್ಲಿಯೇ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರ್ ಬಂಗಾರಪ್ಪ ಏನ್ ರಾಷ್ಚ್ರೀಯ ಅಧ್ಯಕ್ಷರಾ, ಪ್ರಧಾನಿ ಮಂತ್ರಿಯಾ? ನೂರಕ್ಕೆ ನೂರು ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತೆ ಅಂತೀಯಾ. ನಿನಗೆ ಬಿಜೆಪಿ ಪಕ್ಷದ ತತ್ವ, ಸಿದ್ಧಾಂತ ಗೊತ್ತಾ? ಅನಾಥ ಶಿಶುನಾಗಿದ್ದೆ. ಕಾಂಗ್ರೆಸ್ ನಲ್ಲಿದ್ದಾಗ ಸೋತು ಸುಣ್ಣವಾಗಿದ್ದೆ. ರಾಜಕಾರಣದಲ್ಲಿ ಪುನರ್ಜನ್ಮ ನೀಡಿದ್ದು ಯಡಿಯೂರಪ್ಪ. ಜಿಲ್ಲಾ ಬಿಜೆಪಿ, ಸಂಘ ಪರಿವಾರದವರ ಜೊತೆ ಇಲ್ವ ನೀನು. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ. ನೀನು ಮಾತನಾಡುತ್ತೀಯಾ ಎಂದು ಟೀಕಾಪ್ರಹಾರ ನಡೆಸಿದರು.
ಸೊರಬದಲ್ಲಿ 22 ಸಾವಿರ ಸದಸ್ಯತ್ವ ಅಭಿಯಾನ ನಡೆದಿದ್ದರೆ ಅದಕ್ಕೆ ಕಾರಣ ನೀನಲ್ಲ. ಹಿರಿಯ ಮುಖಂಡ ದತ್ತಾತ್ರಿ, ಶಿವಮೊಗ್ಗ ಜಿಲ್ಲೆಯ ಬಿಜೆಪಿ ಮುಖಂಡರು. ಸೊರಬ ಮುಖಂಡರ ಜೊತೆ ಚರ್ಚೆ ನಡೆಸಿ ರಾಘವೇಂದ್ರ
ಅವರು ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಿದ್ದಾರೆ. ಬಂಗಾರಪ್ಪನವರು ಬಿಜೆಪಿಗೆ ಬಂದಾಗ ನೀನು ಕಾಂಗ್ರೆಸ್ ನಲ್ಲೇ ಇದ್ದೆ. ಶಿವಮೊಗ್ಗದ ಮುಖಂಡರು ಸೊರಬ ಕಾರ್ಯಕರ್ತರ ಜೊತೆಗೂಡಿ ಸಕ್ರಿಯ ಸದಸ್ಯತ್ವ ಮಾಡಿದ್ರು.
ಮನೆಯಲ್ಲಿ ಸಭೆ ಮಾಡಿದ್ರೆ ದೊಡ್ಡ ಮನುಷ್ಯನಾಗಿಬಿಡ್ತೀಯಾ? ತಾಕತ್ತಿದ್ದರೆ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಶಕ್ತಿ ಇದೆಯಾ ನಿನಗೆ? ಮೌನವಾಗಿದ್ದು ನಮ್ಮ ದೌರ್ಬಲ್ಯವಲ್ಲ ಎಂದು ಕಿಡಿಕಾರಿದರು.
ಕುಮಾರ್ ಬಂಗಾರಪ್ಪ ಕಾಂಗ್ರೆಸ್ ನಲ್ಲಿದ್ದು ಬಂದು ನೀತಿ ಪಾಠ ಮಾಡುತ್ತೀಯಾ? ಬಿಜೆಪಿ ಮತ್ತು ಕೆಜೆಪಿ ಒಂದೇ. ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡುತ್ತೀಯಾ? ವಿಜಯೇಂದ್ರ ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷರು, ಮಂಡಲ ಅಧ್ಯಕ್ಷರು ಆಗಿಲ್ಲ. ಎಲ್ಲರ ಅಭಿಪ್ರಾಯ ಪಡೆದು ಘೋಷಿಸಲಾಗಿದೆ. ಇದು ಗೊತ್ತಿಲ್ಲವಾ ನಿನಗೆ ಎಂದು ಬೆಂಕಿಯುಗುಳಿದರು.
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯನೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಅಷ್ಟೇ ಸತ್ಯ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದರೆ ಕಾರ್ಯಕರ್ತರು, ಮುಖಂಡರಿಗೆ ಗೌರವ ಬರುತ್ತದೆ. ಬಿಜೆಪಿಯಲ್ಲಿ ಏನು ನಡೆಯುತ್ತಿದೆ? ಅಪಮಾನ ಆಗುತ್ತಿದೆ ಅಂತಾರೆ ಮುಖಂಡರು ಮತ್ತು ಕಾರ್ಯಕರ್ತರು. ಹೈಕಮಾಂಡ್ ಭೇಟಿ ಮಾಡಿ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಿ. ದಾರಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ. ಜಿ. ಪಂ., ತಾ.ಪಂ. ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ವಿಧಾನಸಭೆ ಚುನಾವಣೆ ಅವರ ನೇತೃತ್ವದಲ್ಲಿ ಹೋಗಿ ಗೆಲ್ಲುತ್ತೇವೆ ಎಂದು ಹೇಳಿದರು.
ಈಗ ಕಾಂಗ್ರೆಸ್ ಒಡೆದ ಮನೆ. ನಾಯಿ ನರಿಗಳಂತೆ ಕಚ್ಚಾಡುತ್ತಿದ್ದಾರೆ. ಇದರ ವಿರುದ್ಧ ಭಿನ್ನಮತೀಯರೇ ಹೋರಾಟ ಮಾಡಿ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಅಡ್ಜಸ್ಟ್ ಮತ್ತು ಕುಟುಂಬ ರಾಜಕಾರಣಿಗಳು ನೀವು. ಕುಟುಂಬ ರಾಜಕಾರಣ ಮಾಡುತ್ತಿರುವವರು ನೀವು. ಸತ್ಯ ಹರಿಶ್ಚಂದ್ರರಾ ಮಕ್ಕಳಾ ನೀವು? ಎಲುಬಿಲ್ಲದ ನಾಲಗೆ ಎಂದು ಏನು ಬೇಕಾದರೂ ಮಾತನಾಡಿದರೆ ಸಹಿಸಲ್ಲ ಎಂದು ಗುಡುಗಿದರು.
ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ಬದ್ಧರಾಗಿರಬೇಕು. ಭಿನ್ನಮತೀಯರು ಮಾಧ್ಯಮ, ಪಕ್ಷದ ಮುಖಂಡರ ಮೇಲೂ ಹರಿಹಾಯುತ್ತಾರೆ. ದೆಹಲಿಗೆ ಹೋದರೂ, ದಾವಣಗೆರೆ, ಮೈಸೂರು ಸೇರಿದಂತೆ ಎಲ್ಲೇ ಹೋದರೂ ಲೂಸ್ ಟಾಕ್ ಅವರದ್ದು. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬುದ್ದಿಭ್ರಮಣೆಯಾಗಿದೆ. ಬಿಜೆಪಿ ಸಂಘಟನೆ ಬಗ್ಗೆ ಗೌರವವಿದ್ದರೆ ಹಾದಿಬೀದಿಯಲ್ಲಿ ಮಾತನಾಡುತ್ತಿರಲಿಲ್ಲ. ಒನ್ ಪಾಯಿಂಟ್ ಅಜೆಂಡಾ ಯಡಿಯೂರಪ್ಪ ಮತ್ತು ವಿಜಯೇಂದ್ರ ಟೀಕೆ ಮಾಡುವುದು ಅಷ್ಟೇ. ರಾಜ್ಯಾಧ್ಯಕ್ಷರ ಟೀಕೆ ಮಾಡುವುದೂ ಒಂದೇ. ರಾಷ್ಟ್ರೀಯ ನಾಯಕರಿಗೂ ಅಪಮಾನ ಮಾಡುವುದೂ ಒಂದೇ. ನೊಟೀಸ್ ಕೊಟ್ಟರೆ ಕೊಟ್ಟಿಲ್ಲ ಎಂದ್ರು. ಫೇಕ್ ನೊಟೀಸ್ ಕೊಡಲು ಕೊಡಲು ಆಗುತ್ತಾ? ಉತ್ತರ ಕೊಡಲ್ಲಾ ಅಂದ್ರು. ಟ್ವೀಟ್ಟರ್ ನಲ್ಲಿ ಉತ್ತರ ಕೊಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದರು.
ಹೊಂದಾಣಿಕೆ ರಾಜಕಾರಣಿ ಯಾರು? ಬಬಲೇಶ್ವರದಲ್ಲಿ ಸ್ಪರ್ಧೆ ಮಾಡು. ಯಾಕೆ ಮಾಡಿಲ್ಲ. ಕಾಂಗ್ರೆಸ್ ನ ಪ್ರಭಾವಿ ಸಚಿವನ ಜೊತೆ ಹೊಂದಾಣಿಕೆ ಇಲ್ಲವಾ? ಸಿದ್ದೇಶ್ವರ ಕೋ ಆಪರೇಟಿವ್ ಸೊಸೈಟಿಗೆ ಪತ್ನಿಯನ್ನು ಪಂಚಮಸಾಲಿ ಮುಖಂಡರ ವಿರುದ್ಧ ಸ್ಪರ್ಧಿಸಿ ಗೆಲ್ಲಿಸಲಿಲ್ವಾ? ಭ್ರಷ್ಟ ರಾಜಕಾರಣಿ ನೀವು. ರಾಜಕಾರಣಕ್ಕೆ ಬರುವ ಮುಂಚೆ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.