ಧಾರವಾಡ / ನವದೆಹಲಿ: ನೇಪಾಳ ಮತ್ತು ಟಿಬೆಟ್ (ಚೀನಾ) ಗಡಿಯಲ್ಲಿ ಸಂಭವಿಸಿದ ಆಕಸ್ಮಿಕ ಫ್ಲ್ಯಾಶ್ ಫ್ಲಡ್ (ಆಕಸ್ಮಿಕ ಪ್ರವಾಹ) ದುರಂತದಲ್ಲಿ, ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ಕರ್ನಾಟಕ ಮೂಲದ 45 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ರಾಕೇಶ್ ನಾಯಕ್ ಅವರು ನಾಪತ್ತೆಯಾಗಿದ್ದಾರೆ.
ಕಳೆದ 10 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಧಾರವಾಡದ ರಾಕೇಶ್ ನಾಯಕ್, ಈಶ ಫೌಂಡೇಶನ್ ಆಯೋಜಿಸಿದ್ದ ಕೈಲಾಸ ಮಾನಸಸರೋವರ ಪ್ಯಾಕೇಜ್ ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಆಗಸ್ಟ್ 26ರ ರಾತ್ರಿ ಸುಮಾರು 9:10ಕ್ಕೆ ಅವರು ನೇಪಾಳ-ಚೀನಾ ಗಡಿಯ ಇಮಿಗ್ರೇಷನ್ (ವಲಸೆ) ಕಚೇರಿಯನ್ನು ತಲುಪಿದ್ದರು. ಅವರು ಕಚೇರಿಯ ಒಳಗಿದ್ದಾಗಲೇ, ಕೇವಲ 20 ನಿಮಿಷಗಳ ಅಂತರದಲ್ಲಿ ಭೀಕರ ಪ್ರವಾಹ ಬಂದು ಅಪ್ಪಳಿಸಿದೆ.
ಆಗಸ್ಟ್ 25ರಂದು ರಾಕೇಶ್ ತಮ್ಮ ಪತ್ನಿಯೊಂದಿಗೆ ಕೊನೆಯದಾಗಿ ಮಾತನಾಡಿದ್ದರು. ಪ್ರವಾಹದ ನಂತರ ಅವರ ಕುಟುಂಬಕ್ಕೆ ಯಾವುದೇ ಸಂಪರ್ಕ ಸಿಕ್ಕಿಲ್ಲ. ರಾಕೇಶ್ ಅವರ ತಂದೆ, ನಿವೃತ್ತ ರೈಲ್ವೆ ಅಧಿಕಾರಿ ಶಿವಪ್ರಸಾದ್ ನಾಯಕ್ ಮಾತನಾಡಿ, “ಪ್ರಾರಂಭದಲ್ಲಿ ಮಗ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಲಾಗಿತ್ತು, ಆದರೆ ನಂತರ ಯಾವುದೇ ಮಾಹಿತಿ ಸಿಗುತ್ತಿಲ್ಲ. ಭಾರತೀಯ ರಾಯಭಾರ ಕಚೇರಿ ಮತ್ತು ಈಶ ಫೌಂಡೇಶನ್ ಪ್ರತಿನಿಧಿಗಳು ಆತನನ್ನು ಪತ್ತೆ ಹಚ್ಚಲು ಶ್ರಮಿಸುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
290ಕ್ಕೂ ಹೆಚ್ಚು ಭಾರತೀಯರು ನಾಪತ್ತೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಮಾಹಿತಿಯಂತೆ, ಈ ಭೀಕರ ಪ್ರವಾಹದಿಂದಾಗಿ ಚೀನಾ ಗಡಿ ಪ್ರದೇಶದಲ್ಲಿ 290ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದು, ಸುಮಾರು 200ಕ್ಕೂ ಹೆಚ್ಚು ಮಂದಿ ಸಿಲುಕಿಕೊಂಡಿದ್ದಾರೆ. ಕರ್ನಾಟಕದ ಒಟ್ಟು 13 ಯಾತ್ರಿಕರು ಈ ಭಾಗದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ರಕ್ಷಣೆಗಾಗಿ ಭಾರತ ಸರ್ಕಾರವು ನೇಪಾಳ ಮತ್ತು ಚೀನಾ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.





Leave a comment