ನವದೆಹಲಿ: ತಾವು ಭಾರತೀಯ ಜನತಾ ಪಾರ್ಟಿಯ ಕೈಗೊಂಬೆಯಲ್ಲ ಮತ್ತು ತಮ್ಮ ವೈಯಕ್ತಿಕ ಅಭಿಪ್ರಾಯಗಳು ಯಾವಾಗಲೂ ಪಕ್ಷದ ನಿಲುವಿಗೆ ಬದ್ಧವಾಗಿರಬೇಕಿಲ್ಲ ಎಂದು ಬಾಲಿವುಡ್ ನಟಿ ಹಾಗೂ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ತಿಳಿಸಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನಾನು ಪಕ್ಷದಿಂದ ದೂರವಾಗಲು ಬಯಸುವುದಿಲ್ಲ. ಆದರೆ ಸುತ್ತಲೂ ಜೋರು ಗಲಾಟೆ ಇದ್ದಾಗ ನಮ್ಮ ಧ್ವನಿ ಕೇಳಿಸಲು ಗಟ್ಟಿಯಾಗಿ ಮಾತನಾಡಬೇಕಾಗುತ್ತದೆ. ನನ್ನ ರಾಜಕೀಯ ಜೀವನಕ್ಕೆ ಕೇವಲ 2 ವರ್ಷ, ಆದರೆ ಚಿತ್ರರಂಗದಲ್ಲಿ 20 ವರ್ಷಗಳ ಸುದೀರ್ಘ ಅಸ್ತಿತ್ವವಿದೆ. ಬಿಜೆಪಿ ಇಂದು ನನ್ನ ಜೊತೆಗಿರಬಹುದು, ನಾಳೆ ಇಲ್ಲದಿರಬಹುದು. ಆದರೆ ನನ್ನ ಚಿಂತನೆಗಳು ನನ್ನ ಸ್ವಂತದ್ದು” ಎಂದು ಹೇಳಿದ್ದಾರೆ.
ಇನ್ನು ಸಿನಿಮಾ ವೃತ್ತಿಜೀವನದ ಕುರಿತು ಮಾತನಾಡಿದ ಕಂಗನಾ, “ಹಲವು ನಿರ್ದೇಶಕರು ಇಂದಿಗೂ ನನ್ನನ್ನು ಅತ್ಯಂತ ಬೇಡಿಕೆಯ ನಟಿಯೆಂದು ಪರಿಗಣಿಸಿದ್ದಾರೆ. ಮತ್ತೆ ಬಣ್ಣದ ಲೋಕಕ್ಕೆ ಮರಳಿದರೆ ಖಾನ್ ಅಥವಾ ಕುಮಾರ್ ಜೊತೆ ನಟಿಸುವುದಕ್ಕಿಂತ ನನ್ನ ವಯಸ್ಸಿಗೆ ಸೂಕ್ತವಾಗುವ ವಿಭಿನ್ನ ಪಾತ್ರಗಳಲ್ಲಿ ನಟಿಸಲು ಆದ್ಯತೆ ನೀಡುತ್ತೇನೆ” ಎಂದಿದ್ದಾರೆ.
ಇದೇ ವೇಳೆ ನಟಿ ಕೃತಿ ಸನೋನ್ ಅವರ ಜಾಹೀರಾತು ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಕೇವಲ ಉಡುಪಿನ ವಿಷಯವಲ್ಲ, ಸನಾತನ ಸಂಸ್ಕೃತಿಯ ಸಾಂಪ್ರದಾಯಿಕ ಅಂಶಗಳು ಜಾಹೀರಾತಿನಲ್ಲಿ ಇಲ್ಲದಿರುವುದೇ ನಿಜವಾದ ಕಳವಳ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.





Leave a comment